×
Ad

ಜೈಪುರದ ಕೆಫೆ ಕಾಫಿ ಡೇ ರೆಸ್ಟಾರೆಂಟಿನ ಫ್ರಿಜ್ಜಿನಲ್ಲಿದ್ದವು ಜಿರಳೆಗಳು !

Update: 2017-03-28 11:56 IST

ಹೊಸದಿಲ್ಲಿ, ಮಾ.28: ಜೈಪುರದ ಹವಾಮಹಲ್ ನಲ್ಲಿರುವ ಕೆಫೆ ಕಾಫಿ ಡೇ ರೆಸ್ಟಾರೆಂಟ್ ಒಂದರ ರೆಫ್ರಿಜರೇಟರ್ ಒಳಗೆ ಜಿರಳೆಗಳನ್ನು ನೋಡಿದ ಗ್ರಾಹಕರೊಬ್ಬರು ದಂಗಾಗಿ ಅದರ ವೀಡಿಯೊ ತೆಗೆಯುವುದನ್ನು ನೋಡಿದ ರೆಸ್ಟಾರೆಂಟಿನ ಮಹಿಳಾ ಉದ್ಯೋಗಿಯೊಬ್ಬರು ಆ ಗ್ರಾಹಕನ ಬಳಿ ಬಂದು ಆತನಿಗೆ ಕಪಾಳ ಮೋಕ್ಷ ನಡೆಸಿದ್ದಾರೆ. ಈ ಘಟನೆಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಿಖಿಲ್ ಆನಂದ್ ಸಿಂಗ್ ಎಂಬವರು ಈ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದಾರೆ. ಮಾರ್ಚ್ 12 ರಂದು ಅರ್ಪಣ್ ವರ್ಮ ಎಂಬವರು ತಮ್ಮ ಸ್ನೇಹಿತರೊಂದಿಗೆ ಆ ನಿರ್ದಿಷ್ಟ ಕೆಫೆ ಕಾಫಿ ಡೇ ರೆಸ್ಟಾರೆಂಟಿಗೆ ಹೋಗಿ ಗ್ರೀನ್ ಆಪಲ್ ಸೋಡಾ ಆರ್ಡರ್ ಮಾಡಿದ್ದರು. ಅದನ್ನು ಅವರಿಗೆ ನೀಡಿದಾಗ ರೆಫ್ರಿಜರೇಟರಿನಲ್ಲಿ ಜಿರಳೆ ಮತ್ತಿತರ ಕೀಟಗಳನು ನೋಡಿದ್ದರು. ಇದನ್ನು ಅವರು ಅಲ್ಲಿದ್ದ ಸಿಬ್ಬಂದಿಗೆ ತಿಳಿಸಿದಾಗ ಅವರು ತಮ್ಮ ಆಹಾರಕ್ಕಾಗಿ ನೀಡಿದ ಹಣ ಅವರಿಗೆ ಹಿಂದಿರುಗಿಸಲಾಯಿತಾದರೂ ಅಲ್ಲಿನ ಸಿಬ್ಬಂದಿ ಅದೇ ಫ್ರಿಜ್ಜಿನಲ್ಲಿದ್ದ ಆಹಾರವನ್ನು ಇತರ ಗ್ರಾಹಕರಿಗೆ ನೀಡುತ್ತಿರುವುದನ್ನು ಕಂಡು ವರ್ಮ ಆಕ್ಷೇಪ ವ್ಯಕ್ತಪಡಿಸಿದಾಗ ಅವರನ್ನು ಅಲ್ಲಿಂದ ಹೊರ ಹೋಗಲು ಹೇಳಲಾಯಿತು. ನಂತರ ಅವರು ಅದರ ವೀಡಿಯೋ ತೆಗೆಯಲಾರಂಭಿಸಿದಾಗ, ಅಲ್ಲಿದ್ದ ಒಬ್ಬಳು ಮಹಿಳಾ ಉದ್ಯೋಗಿ ಅವರಿಗೆ ಎಲ್ಲರೆದುರೇ ಕಪಾಳಮೋಕ್ಷ ಮಾಡಿಬಿಟ್ಟಿದ್ದರು.

ಕೆಫೆ ಕಾಫೀ ಡೇ ಈ ಬಗ್ಗೆ ಟ್ವಿಟ್ಟರಿನಲ್ಲಿ ಪ್ರತಿಕ್ರಿಯಿಸಿ ಘಟನೆಯನ್ನು ಅವಲೋಕಿಸಲಾಗುತ್ತಿದ್ದು ಗ್ರಾಹಕರಿಗೆ ಗುಣಮಟ್ಟದ ಆಹಾರ ಒದಗಿಸುವುದು ತನ್ನ ಕರ್ತವ್ಯವೆಂದು ಹೇಳಿದೆ. ಘಟನೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News