×
Ad

ದಲಿತ ದೌರ್ಜನ್ಯ ಪ್ರಕರಣ: ನೇರ ಪರಿಹಾರ ಕ್ರಮಕ್ಕೆ ಸಿದ್ಧಗೊಳ್ಳುತ್ತಿದೆ ‘ಮೊಬೈಲ್ ಆ್ಯಪ್’

Update: 2017-03-28 13:37 IST

ಮಂಗಳೂರು, ಮಾ. 28: ದಲಿತ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ ಪರಿಹಾರವನ್ನು ನೇರವಾಗಿ ಸಂತ್ರಸ್ತರಿಗೆ ಅಲ್ಪಾವಧಿಯಲ್ಲೇ ವರ್ಗಾಯಿಸಲು ಸಮಾಜ ಕಲ್ಯಾಣ ಇಲಾಖೆಯು ‘ಮೊಬೈಲ್ ಆ್ಯಪ್’ ಸಿದ್ಧಪಡಿಸುತ್ತಿದೆ.

ಪ್ರಸ್ತುತ ದಲಿತ ದೌರ್ಜನ್ಯ ಪ್ರಕರಣವೊಂದು ದಾಖಲಾದ ಬಳಿಕ, ಪರಿಹಾರವು ಸಮಾಜ ಕಲ್ಯಾಣ ಇಲಾಖೆಯಿಂದ ತಹಶೀಲ್ದಾರ್ ಮೂಲಕ ಸಂತ್ರಸ್ತರಿಗೆ ಚೆಕ್ ಮೂಲಕ ನೀಡಲಾಗುತ್ತಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಕೆಲವೊಂದು ಬಾರಿ ಸಾಕಷ್ಟು ವಿಳಂಬವಾಗುತ್ತಿದ್ದು, ಸಂತ್ರಸ್ತರಿಗೆ ತೊಂದರೆಯಾಗುತ್ತಿದೆ. ಅದನ್ನು ತಪ್ಪಿಸಲು ಇದೀಗ ಸಮಾಜ ಕಲ್ಯಾಣ ಇಲಾಖೆಯ ನಿರ್ದೆಶನಾಲಯ ರಾಜ್ಯ ಮಟ್ಟದಲ್ಲಿ ಮೊಬೈಲ್ ಆ್ಯಪನ್ನು ಸಿದ್ಧಪಡಿಸುತ್ತಿದೆ.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ದಲಿತರ ಕುಂದುಕೊರತೆಗಳ ಆಲಿಕೆ ಸಭೆಯಲ್ಲಿ ಭಾಗವಹಿಸಿದ್ದ ದ.ಕ.ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಡಾ. ಸಂತೋಷ್ ಕುಮಾರ್ ಆ್ಯಪ್ ಬಗ್ಗೆ ಮಾಹಿತಿ ನೀಡಿದರು.

‘‘ರಾಜ್ಯ ಮಟ್ಟದಲ್ಲಿ ಈ ಆ್ಯಪ್ ಸಿದ್ಧಗೊಳ್ಳುತ್ತಿದೆ. ದೌರ್ಜನ್ಯ ಪ್ರಕರಣಗಳು ದಾಖಲೆ ಆದಾಗ ಅದು ಮೊಬೈಲ್ ಆ್ಯಪ್ ಮೂಲಕ ಸಂಬಂಧಪಟ್ಟ ಡಿವೈಎಸ್ಪಿ, ಎಸ್ಪಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ರವಾನೆಯಾಗುತ್ತದೆ. ಆಗ ಪರಿಹಾರವನ್ನು ಇಲಾಖೆಯು ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಸಹಕಾರಿಯಾಗಲಿದೆೆ’’ ಎಂದು ಡಾ. ಸಂತೋಷ್ ಕುಮಾರ್ ತಿಳಿಸಿದರು.

‘‘ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವ ಸಂದರ್ಭ ಸಂತ್ರಸ್ತರು ತಮ್ಮ ಹೆಸರು ವಿಳಾಸದ ಜತೆಗೆ ಇನ್ನು ಮುಂದೆ ಬ್ಯಾಂಕ್ ಖಾತೆ ವಿವರ ನೀಡಲು ಸೂಚಿಸಲಾಗುವುದು. ಈ ಮೂಲಕ ಸಂತ್ರಸ್ತರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ಹಣ ವರ್ಗಾವಣೆಯಾಗಲಿದೆ. ಪ್ರಸ್ತುತ ದಲಿತ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸಿಕೊಂಡು 24 ಗಂಟೆಯೊಳಗೆ ಪರಿಹಾರ ಒದಗಿಸಬೇಕೆಂಬ ನಿಯಮವಿದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಪರಿಹಾರ ನೀಡಿಕೆಯಲ್ಲಿ ವಿಳಂಬವಾಗುತ್ತಿದೆ. ಅದಲ್ಲದೆ ಪರಿಹಾರ ಹಣ ಚೆಕ್‌ನಲ್ಲಿ ತಹಶೀಲ್ದಾರ್ ಮೂಲಕ ವರ್ಗಾವಣೆಯಾಗುತ್ತಿದೆ. ಇವೆಲ್ಲಾ ಕಿರಿಕಿರಿಯಿಂದ ತಪ್ಪಿಸಲು ಈ ಮೊಬೈಲ್ ಆ್ಯಪ್ ನೆರವಾಗಲಿದೆ. ಈ ಆ್ಯಪ್‌ನ ನೆರವಿನಲ್ಲಿ ಆರ್‌ಟಿಜಿಎಸ್ ವ್ಯವಸ್ಥೆಯಲ್ಲಿ ಪರಿಹಾರ ಹಣ ಸಂದಾಯವಾಗಲಿದೆ’’ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News