ಜೋತಿಷಿಗಳ ಸೋಗಿನಲ್ಲಿ ವಂಚನೆ ನಡೆದರೆ ಸೂಕ್ತ ಕ್ರಮ: ಎಸ್ಪಿ
ಮಂಗಳೂರು, ಮಾ. 28: ಜಿಲ್ಲೆಯಲ್ಲಿ ಜೋತಿಷಿಗಳ ಸೋಗಿನಲ್ಲಿ ಕೆಲವರು ಜನಸಾಮಾನ್ಯರನ್ನು ವಂಚಿಸುತ್ತಿರುವ ದೂರುಗಳು ಬರುತ್ತಿವೆ. ಇಂತಹ ಅಪರಾಧಿಗಳ ವಿರುದ್ಧ ಕಠಿಣ ಶಿಸ್ತು ಕ್ರಮವನ್ನು ಪೊಲೀಸ್ ಇಲಾಖೆ ಮಾಡಲಿದೆ ಎಂದು ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ ಭರವಸೆ ನೀಡಿದ್ದಾರೆ.
ಎಸ್‌ಪಿ ಕಚೇರಿಯಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಿಲ್ಲಾ ಮಟ್ಟದ ಸಭೆಯಲ್ಲಿ ಮುಖಂಡರೊಬ್ಬರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಈಗಾಗಲೇ ಮಾಧ್ಯಮಗಳಲ್ಲಿ ಸುದ್ದಿಯಾದ ಜ್ಯೋತಿಷಿ ವಿರುದ್ಧ ಎ್ಐಆರ್ ದಾಖಲು ಮಾಡುವಂತೆ ಸಂಬಂಧಪಟ್ಟ ಠಾಣಾ ಪೊಲೀಸ್ ಅಧಿಕಾರಿಗೆ ತಿಳಿಸಲಾಗುವುದು. ಇದು ಮಾತ್ರವಲ್ಲದೆ ಜ್ಯೋತಿಷ್ಯಶಾಸದ ಹೆಸರಿನಲ್ಲಿ ವಂಚಿಸುವ ಜಾಲದ ವಿರುದ್ಧ ಕಾನೂನು ಸಲಹೆಗಾರರ ಬಳಿ ಮಾಹಿತಿ ಪಡೆದುಕೊಂಡು, ಈ ಜಾಲವನ್ನು ಮಟ್ಟಹಾಕಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಬೆಳ್ತಂಗಡಿ ಠಾಣಾ ವ್ಯಾಪ್ತಿ ಸೇರಿದಂತೆ ಹಲವೆಡೆ ಜ್ಯೋತಿಷ್ಯ ಶಾಸದ ಹೆಸರಿನಲ್ಲಿ ಜನರನ್ನು ಯಮಾರಿಸುವ ಪ್ರಕರಣ ನಡೆಯುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಮಾನ ಹಾನಿಯ ಜತೆ ಪ್ರಾಣ ಹಾನಿಯೂ ಆಗಬಹುದು ಎಂದು ಮುಖಂಡ ಶೇಖರ್ ಎಸ್ಪಿ ಗಮನಕ್ಕೆ ತಂದರು.
ಬಂಟ್ವಾಳ, ಬಿ.ಸಿ.ರೋಡುಗಳಲ್ಲಿ ಸಮಯವೊಂದನ್ನು ನಿಗದಿಪಡಿಸಿ ವಾಹನಗಳಿಂದ ಸಾಮಾನು, ಸರಂಜಾಮುಗಳನ್ನು ಲೋಡ್, ಅನ್‌ಲೋಡ್ ಮಾಡಬೇಕು. ಇದರಿಂದ ಟ್ರಾಫಿಕ್ ದಟ್ಟಣೆ ತಪ್ಪಿಸಬಹುದು ಎಂದು ಸಭೆಯಲ್ಲಿ ದಲಿತ ನಾಯಕರ ಅಹವಾಲಿಗೆ ಎಸ್ಪಿ ಭೂಷಣ್ ಬೊರಸೆ ಪ್ರತಿಕ್ರಿಯಿಸಿದರು.
ಸಮಸ್ಯೆಯನ್ನು ಸಿಎಂ, ಪಿಎಂ ಗಮನಕ್ಕೆ ತನ್ನಿ !
ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಸರಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಯಾವುದೇ ಕೆಲಸಗಳು ತ್ವರಿತಗತಿಯಲ್ಲಿ ಆಗುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಪರಿಶಿಷ್ಟ ಜಾತಿ-ಪಂಗಡದ ಮಕ್ಕಳು ವಿದ್ಯೆ ಕಲಿತರೂ ಸೂಕ್ತ ಉದ್ಯೋಗ ಸಿಗದೆ ಮನೆಯಲ್ಲಿದ್ದಾರೆ. ಈ ಬಗ್ಗೆ ಇಲಾಖೆಯ ಜಿಲ್ಲಾ ಮುಖ್ಯಸ್ಥರಾದ ನೀವು ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತನ್ನಿ ಎಂದು ಸುಳ್ಯದ ಸರಸ್ವತಿ ಸಭೆಯಲ್ಲಿ ಆಗ್ರಹಿಸಿದರು.
ನಿರ್ಣಯಗಳು ಕಾರ್ಯಗತವಾಗಲಿ
ಜಿಲ್ಲಾ ಮಟ್ಟದಲ್ಲಿ ನಡೆಯುವ ಕೆಲವು ಸಭೆಗಳಲ್ಲಿ ಕೇವಲ ನಿರ್ಣಯಗಳು ಆಗುತ್ತದೆ. ಆದರೆ ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಬೆಳ್ತಂಗಡಿಯ ದಲಿತ ನಾಯಕ ಶೇಖರ್ ಬೇಸರಿಸಿದರು.
ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ಸಭೆಯಲ್ಲಿ ಮಾತನಾಡಿದ ಅವರು, ಈ ವರದಿ ಜಾರಿಯಾದರೆ ಪಶ್ಚಿಮ ಘಟ್ಟಗಳಲ್ಲಿ ವಾಸವಿರುವ ಮಲೆಕುಡಿಯರು ಸೇರಿದಂತೆ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಕಾರ್ಯ ನಡೆಯಲಿದೆ.ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಲಿದೆ. 1998ರಲ್ಲಿ ಕುದುರೆಮುಖ ಉದ್ಯಾನವನವಾದಾಗ ಆದಿವಾಸಿ, ಮಲೆಕುಡಿಯರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿದ್ದರೂ ಬಳಿಕ ಬಲವಂತವಾಗಿ ಎಬ್ಬಿಸಲಾಯಿತು. ಇದರಿಂದ ಈ ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಯಿತು. ಕೇರಳದಲ್ಲಿ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬದಲಾವಣೆ ಆಗಿದೆ ಎಂದು ಶೇಖರ್ ಹೇಳಿದರು.
ಈ ಸಂದರ್ಭ ದ.ಕ.ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.