ವರ್ಣಭೇದ ವಿರೋಧಿ ಹೋರಾಟಗಾರ ಅಹ್ಮದ್ ಕತ್ರಡ ಇನ್ನಿಲ್ಲ
ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ), ಮಾ. 28: ದಕ್ಷಿಣ ಆಫ್ರಿಕದ ಖ್ಯಾತ ವರ್ಣಭೇದ ವಿರೋಧಿ ಹೋರಾಟಗಾರ ಅಹ್ಮದ್ ಕತ್ರಡ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ರಾಬಿನ್ ದ್ವೀಪದಲ್ಲಿ ಕೈದಿಯಾಗಿದ್ದ ಅವರು ದಕ್ಷಿಣ ಆಫ್ರಿಕದ ಶ್ವೇತವರ್ಣೀಯರ ಆಡಳಿತದ ವಿರುದ್ಧದ ಹೋರಾಟದಲ್ಲಿ ನೆಲ್ಸನ್ ಮಂಡೇಲಾರ ಆಪ್ತ ಸ್ನೇಹಿತನಾಗಿದ್ದರು.
1964ರಲ್ಲಿ ನಡೆದ ರಿವೋನಿಯ ವಿಚಾರಣೆಯಲ್ಲಿ, ಮಂಡೇಲಾ ಜೊತೆಗೆ ಕತ್ರಡ ಅವರನ್ನೂ ವಿಚಾರಣೆಗೊಳಪಡಿಸಿ ಜೈಲಿಗೆ ಕಳುಹಿಸಲಾಗಿತ್ತು. ಈ ವಿಚಾರಣೆಯು ಜಗತ್ತಿನ ಗಮನವನ್ನು ವರ್ಣಭೇದ ಆಡಳಿತದ ಕ್ರೂರ ಕಾನೂನು ವ್ಯವಸ್ಥೆಯತ್ತ ಸೆಳೆದಿತ್ತು.
ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕೊಂಚ ಸಮಯ ಅಸ್ವಸ್ಥರಾಗಿದ್ದ ಅವರು ಜೊಹಾನ್ಸ್‌ಬರ್ಗ್‌ನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.
ಕತ್ರಡ 26 ವರ್ಷ ಮತ್ತು ಮೂರು ತಿಂಗಳನ್ನು ಜೈಲಿನಲ್ಲಿ ಕಳೆದರು. ಈ ಪೈಕಿ 18 ವರ್ಷಗಳನ್ನು ಅವರು ರಾಬಿನ್ ದ್ವೀಪದ ಜೈಲಿನಲ್ಲಿ ಕಳೆದರು.
ವರ್ಣಭೇದ ಆಡಳಿತ ಪತನಗೊಂಡ ಬಳಿಕ, 1994ರಿಂದ 1999ರವರೆಗೆ ಮೊದಲ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ ಸರಕಾರದಲ್ಲಿ ಅವರು ಅಧ್ಯಕ್ಷ ನೆಲ್ಸನ್ ಮಂಡೇಲಾರ ಸಂಸದೀಯ ಸಲಹಾಕಾರರಾಗಿ ಸೇವೆ ಸಲ್ಲಿಸಿದರು.
‘‘ಇದು ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್, ಅದರಲ್ಲೂ ಮುಖ್ಯವಾಗಿ ಸ್ವಾತಂತ್ರ ಚಳವಳಿ ಮತ್ತು ದಕ್ಷಿಣ ಆಫ್ರಿಕ ಅನುಭವಿಸಿದ ಬೃಹತ್ ನಷ್ಟವಾಗಿದೆ’’ ಎಂದು ಅಹ್ಮದ್ ಕತ್ರಡ ಫೌಂಡೇಶನ್‌ನ ಮುಖ್ಯಸ್ಥ ನೀಶನ್ ಬಾಲ್ಟನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ ‘ಕ್ಯಾತಿ’ ಜಗತ್ತಿನ ವಿವಿಧ ಭಾಗಗಳ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದ್ದರು’’ ಎಂದು ಅವರು ಹೇಳಿದ್ದಾರೆ.
17ರ ವಯಸ್ಸಿನಲ್ಲೇ ಹೋರಾಟ
ಬಿಳಿಯ ಅಲ್ಪಸಂಖ್ಯಾತರ ವರ್ಣಭೇದ ಸರಕಾರದ ವಿರುದ್ಧದ ಅವರ ಹೋರಾಟ 17ರ ವಯಸ್ಸಿನಲ್ಲೇ ಆರಂಭಗೊಂಡಿತು. ಭಾರತೀಯ ದಕ್ಷಿನ ಆಫ್ರಿಕನ್ನರ ವಿರುದ್ಧ ತಾರತಮ್ಯ ತೋರಿಸುವ ಕಾನೂನುಗಳನ್ನು ಉಲ್ಲಂಘಿಸಿದುದಕ್ಕಾಗಿ 1946ರಲ್ಲಿ ಪೊಲೀಸರು 2,000 ಮಂದಿಯನ್ನು ಬಂಧಿಸಿದ್ದರು. ಆ ಪೈಕಿ ಅಹ್ಮದ್ ಕತ್ರಡ ಕೂಡ ಒಬ್ಬರಾಗಿದ್ದರು.
ಆಫ್ರಿಕನ್ ನ್ಯಾಶನಲ್ ಕಾಂಗ್ರೆಸನ್ನು 1960ರಲ್ಲಿ ನಿಷೇಧಿಸಲಾಯಿತು. ಎರಡು ವರ್ಷಗಳ ಬಳಿಕ ಕತ್ರಡ ಅವರನ್ನು ‘ಗೃಹ ಬಂಧನ’ದಲ್ಲಿರಿಸಲಾಯಿತು. ಅಲ್ಲಿಂದಲೇ ಅವರು ಭೂಗತರಾದರು.
1963 ಜುಲೈಯಲ್ಲಿ ಜೊಹಾನ್ಸ್‌ಬರ್ಗ್‌ನ ಉಪನಗರ ರಿವೋನಿಯದಲ್ಲಿರುವ ಲಿಲಿಸ್ಲೀಫ್ ಫಾರ್ಮ್ ಮೇಲೆ ದಾಳಿ ನಡೆಸಿದ ಪೊಲೀಸರು ಕತ್ರಡರನ್ನು ಬಂಧಿಸಿದರು. ಅಲ್ಲಿ ಕತ್ರಡ ಮತ್ತು ಇತರ ಹಿರಿಯ ಸದಸ್ಯರು ರಹಸ್ಯವಾಗಿ ಭೇಟಿಯಾಗುತ್ತಿದ್ದರು.
ಬಳಿಕ ನಡೆದ ಪ್ರಸಿದ್ಧ ರಿವೋನಿಯ ವಿಚಾರಣೆಯಲ್ಲಿ, ಕತ್ರಡ ಸೇರಿದಂತೆ ಎಂಟು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಅವರು ರಾಬಿನ್ ದ್ವೀಪದಲ್ಲಿ ಕಠಿಣ ಕೆಲಸ ಮಾಡಬೇಕಾಗಿತ್ತು. ಅವರೊಂದಿಗಿದ್ದ ಇತರ ಕೈದಿಗಳೆಂದರೆ ಮಂಡೇಲ, ವಾಲ್ಟರ್ ಸಿಸುಲು ಮತ್ತು ಡೆನಿಸ್ ಗೋಲ್ಡ್‌ಬರ್ಗ್.