ಆರ್‌ಬಿಐ ಕಚೇರಿಗಳಲ್ಲಿ ಮೈಲುದ್ದದ ಸಾಲುಗಳಿಗೆ ಅನರ್ಹ ವ್ಯಕ್ತಿಗಳು ಕಾರಣ : ಸಚಿವ ಮೇಘ್ವಾಲ್

Update: 2017-03-28 15:02 GMT

ಹೊಸದಿಲ್ಲಿ,ಮಾ.28: ನಿಷೇಧಿತ ನೋಟುಗಳನ್ನು ವಿನಿಮಯಿಸಿಕೊಳ್ಳಲು ಅನರ್ಹ ವ್ಯಕ್ತಿಗಳು ಮುಂದಾಗಿರುವುದು ಆರ್‌ಬಿಐನ ನಿಯೋಜಿತ ಕಚೇರಿಗಳಲ್ಲಿ ಉದ್ದನೆಯ ಸರದಿ ಸಾಲುಗಳಿಗೆ ಕಾರಣವಾಗಿದೆ ಎಂದು ಸಹಾಯಕ ವಿತ್ತ ಸಚಿವ ಅರ್ಜುನ ರಾಮ್ ಮೇಘ್ವಾಲ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.

2016,ನವಂಬರ್-ಡಿಸೆಂಬರ್ ಅವಧಿಯಲ್ಲಿ ವಿದೇಶಗಳಲ್ಲಿದ್ದ ಭಾರತೀಯ ನಿವಾಸಿ ಪ್ರಜೆಗಳು ಮತ್ತು ವಿದೇಶಗಳಲ್ಲಿ ವಾಸವಾಗಿರುವ ಎನ್ನಾರೈಗಳು ತಮ್ಮ ಬಳಿಯಿರುವ ನಿಷೇಧಿತ ನೋಟುಗಳನ್ನು ಹೊಸನೋಟುಗಳಿಗೆ ವಿನಿಮಯಿಸಿಕೊಳ್ಳಲು ಅನುಕ್ರಮವಾಗಿ 2017,ಮಾ.31 ಮತ್ತು ಜೂ.30ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಮುಂಬೈ, ದಿಲ್ಲಿ, ಕೋಲ್ಕತಾ, ಚೆನ್ನೈ ಮತ್ತು ನಾಗ್ಪುರಗಳಲ್ಲಿಯ ಆರ್‌ಬಿಐ ಕಚೇರಿಗಳನ್ನು ಇದಕ್ಕಾಗಿ ನಿಯೋಜಿಸಲಾಗಿದೆ.

ಆರ್‌ಬಿಐನ ವಿವಿಧ ಕಚೇರಿಗಳ ಹೊರಗೆ ಮೈಲುದ್ದದ ಸರದಿ ಸಾಲುಗಳು ಹಾಗೂ ಜನರಿಗೆ ಆಗುತ್ತಿರುವ ವಿಳಂಬ ಮತ್ತು ಕಿರುಕುಳವನ್ನು ಸರಕಾರವು ಗಮನಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು, ನಿಷೇಧಿತ ನೋಟುಗಳ ವಿನಿಮಯಕ್ಕೆ ಅರ್ಹತೆಗಳು ಮತ್ತು ಇತರ ಅಗತ್ಯ ದಾಖಲೆಗಳ ಕುರಿತು ಆರ್‌ಬಿಐ ತನ್ನ ಜಾಲತಾಣದಲ್ಲಿ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಕೌಂಟರ್‌ಗಳಲ್ಲಿ ಸಲ್ಲಿಸಲಾಗುವ ದಾಖಲೆಗಳ ಸೂಕ್ತ ಪರಿಶೀಲನೆಗಾಗಿ ಸಾಕಷ್ಟು ಸಮಯ ವ್ಯಯವಾಗುತ್ತಿದೆ. ಅಪೂರ್ಣ ದಾಖಲೆಗಳಿಂದಾಗಿ ಈ ಪ್ರಕ್ರಿಯೆ ಇನ್ನಷ್ಟು ಜಟಿಲಗೊಳ್ಳುತ್ತಿದೆ ಎಂದು ವಿವರಿಸಿದರು.

ನೆರೆಯ ರಾಜ್ಯಗಳ ಭಾರೀ ಸಂಖ್ಯೆಯ ಜನರ ದಟ್ಟಣೆಯಿಂದಾಗಿ ಮುಂಬೈ ಮತ್ತು ದಿಲ್ಲಿಗಳ ಆರ್‌ಬಿಐ ಕಚೇರಿಗಳಲ್ಲಿ ಮಾತ್ರ ಉದ್ದನೆಯ ಸಾಲುಗಳು ಕಂಡುಬರುತ್ತಿವೆ ಮತ್ತು ಅಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೋಟು ವಿನಿಮಯ ಕಾರ್ಯಕ್ಕೆ ನಿಯೋಜಿಸ ಲಾಗಿದೆ ಎಂದರು.

ನೋಟು ಅಮಾನ್ಯ ಅವಧಿಯಲ್ಲಿ ವಿದೇಶಗಳಲ್ಲಿದ್ದ ಭಾರತೀಯರಿಗೆ ನೋಟುಗಳ ವಿನಿಮಯದ ಮೇಲೆ ಯಾವುದೇ ಮಿತಿಯನ್ನು ಹೇರಲಾಗಿಲ್ಲ, ಆದರೆ ಫೆಮಾ ನಿಯಮಾವಳಿಗಳಂತೆ ಎನ್ನಾರೈಗಳಿಗೆ ಮಿತಿಯನ್ನು ವಿಧಿಸಲಾಗಿದೆ ಎಂದು ಮೇಘ್ವಾಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News