ಶೇಷಾದ್ರಿ ನಿರ್ದೇಶನದ ತ್ರಿದಿನ ಚಲನಚಿತ್ರೋತ್ಸವಕ್ಕೆ ಚಾಲನೆ
ಉಡುಪಿ, ಮಾ.28: ಉಡುಪಿ ರಂಗಭೂಮಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಸಹಕಾರದೊಂದಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ರಾಷ್ಟ್ರಪ್ರಶಸ್ತಿ ವಿಜೇತ ಪಿ.ಶೇಷಾದ್ರಿ ನಿರ್ದೇಶನದ ತ್ರಿದಿನ ಚಲನಚಿತ್ರೋತ್ಸವವನ್ನು ಜಾದೂಗಾರ ಪ್ರೊ.ಶಂಕರ್ ಮಂಗಳವಾರ ಉದ್ಘಾಟಿಸಿದರು.
ಕಲೆಯಲ್ಲಿ ಶ್ರಾವ್ಯಕ್ಕಿಂತ ದೃಶ್ಯವು ಮಾಧ್ಯಮವು ಹೆಚ್ಚು ಪರಿಣಾಮಕಾರಿ ಯಾಗಿರುತ್ತದೆ. ಹಾಗಾಗಿ ಸಾಮಾಜಿಕ ಕಳಕಳಿಯ ಸಿನೆಮಾಗಳು ಜನ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದು ಪ್ರೊ.ಶಂಕರ್ ಅಭಿಪ್ರಾಯ ಪಟ್ಟರು.
ಎಂಜಿಎಂ ಕಾಲೇಜಿನ ಉಪನ್ಯಾಸಕಿ ಅಪೂರ್ವ ರಾವ್ ಱಬೆಟ್ಟದ ಜೀವೞಸಿನೆಮಾದ ಕುರಿತು ಮಾತನಾಡಿ, ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿ ಹಾಗೂ ಶೇಷಾದ್ರಿ ನಿರ್ದೇಶನದ ಸಿನೆಮಾ ಎರಡೂ ಕೂಡ ಯಶಸ್ವಿ ಸಾಧಿಸಿದೆ. ಪ್ರಕೃತಿ ಮತ್ತು ಮನುಷ್ಯರ ನಡುವಿನ ಅವಿಭಾವ ಸಂಬಂಧ ವನ್ನು ಈ ಸಿನೆಮಾ ತೆರೆದಿಡುತ್ತದೆ ಎಂದರು.
ಕಾದಂಬರಿಯಲ್ಲಿ ಹೇಳುವ ರೀತಿಯಲ್ಲೇ ಸಿನೆಮಾದಲ್ಲಿ ಎಲ್ಲ ಪಾತ್ರಗಳಿಗೂ ಸರಿಯಾದ ಗೌರವ, ಮನ್ನಣೆ ನೀಡಲಾಗಿದೆ. ಈ ಸಿನೆಮಾದ ಮುಖ್ಯ ಸಂದೇಶ ಜೀವನ ಪ್ರೀತಿ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಕವಯತ್ರಿ ವಿಜಯಲಕ್ಷ್ಮಿ ಶಾಂತರಾಮ್ ವಹಿಸಿದ್ದರು. ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಗೌರವಾಧ್ಯಕ್ಷ ಡಾ.ಎಚ್.ಶಾಂತರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಂ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ 'ಬೆಟ್ಟದ ಜೀವ' ಚಲನಚಿತ್ರ ಪ್ರದರ್ಶನಗೊಂಡಿತು.