ಬ್ರಿಟನ್ ರಾಣಿಯ ಕೋಟೆಯ ಸುತ್ತ ಹೆಚ್ಚುವರಿ ಭದ್ರತೆ

Update: 2017-03-28 15:27 GMT

ಲಂಡನ್, ಮಾ. 28: ಮಧ್ಯ ಲಂಡನ್‌ನಲ್ಲಿರುವ ಸಂಸತ್ತಿನ ಸಮೀಪ ವ್ಯಕ್ತಿಯೊಬ್ಬ ಕಳೆದ ವಾರ ನಾಲ್ಕು ಮಂದಿಯನ್ನು ಕೊಂದ ಘಟನೆಯ ಹಿನ್ನೆಲೆಯಲ್ಲಿ, ಪೊಲೀಸರು ರಾಣಿ ಎಲಿಝಬೆತ್‌ರ ವಿಂಡ್ಸರ್ ಕ್ಯಾಸಲ್ ಅರಮನೆಯ ಸುತ್ತ ಹೊಸದಾಗಿ ತಡೆಬೇಲಿಗಳನ್ನು ನಿರ್ಮಿಸಿದ್ದಾರೆ.

ಬ್ರಿಟಿಶ್ ರಾಜಧಾನಿಯಿಂದ 32 ಕಿಲೋಮೀಟರ್ ದೂರದಲ್ಲಿರುವ ಜಗತ್ತಿನ ಅತ್ಯಂತ ಹಳೆಯ ಮತ್ತು ದೊಡ್ಡ ವಾಸಿಸುವ ಕೋಟೆ ವಿಂಡ್ಸರ್‌ನಲ್ಲಿ ಭದ್ರತಾ ಪರಿಶೀಲನೆ ನಡೆಸಿದ ಬಳಿಕ ನೂತನ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಬುಧವಾರ ನಡೆಯಲಿರುವ ನಿಯಮಿತ ‘ಚೇಂಜಿಂಗ್ ದ ಗಾರ್ಡ್’ ಸಮಾರಂಭಕ್ಕೆ ಪೂರ್ವಭಾವಿಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಈ ಸಮಾರಂಭವು ಭಾರೀ ಜನಪ್ರಿಯವಾಗಿದೆ. 13 ಲಕ್ಷಕ್ಕೂ ಅಧಿಕ ಪ್ರವಾಸಿಗರು ಪ್ರತಿ ವರ್ಷ ಕೋಟೆಗೆ ಭೇಟಿ ನೀಡುತ್ತಾರೆ.ನೂತನ ತಡೆಬೇಲಿಗಳು ಸಾಮಾನ್ಯ ರಸ್ತೆ ಮುಚ್ಚುಗಡೆಗೆ ಹೆಚ್ಚುವರಿಯಾಗಿರುತ್ತವೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News