×
Ad

​ಬಾಳಿಗಾ ಮನೆಗೆ ಅಪರಿಚಿತನ ಕರೆ: ಪೊಲೀಸರಿಂದ ವಿಚಾರಣೆ

Update: 2017-03-28 23:40 IST

ಮಂಗಳೂರು, ಮಾ. 28: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಮನೆಗೆ ಅಪರಿಚಿತ ಕರೆ ಬಂದಿರುವ ಘಟನೆಯ ಬಗ್ಗೆ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾ.22ರಂದು ಈ ಘಟನೆ ನಡೆದಿದ್ದು, ಹರ್ಷಾ ಬಾಳಿಗಾ ಅವರು ಕರೆಯನ್ನು ಸ್ವೀಕರಿಸಿದ್ದಾರೆ. ಕರೆ ಸ್ವೀಕರಿಸುತ್ತಿದ್ದಂತೆ ಹುಡುಗನೊಬ್ಬನ ಧ್ವನಿ ಕೇಳಿ ಬಂದಿದ್ದು, ‘‘ಇದು ಹರ್ಷ ಟೀಚರ್‌ರವರ ಮನೆಯಾ? ಅಪಘಾತವೊಂದು ಸಂಭವಿಸಿದ್ದು, ನಿಮ್ಮ ಮನೆಗೆ ಈಗ ಪೊಲೀಸರು ಬರಬಹುದು.

ಮನೆಯ ಗೇಟ್‌ನ್ನು ತೆರೆದಿಡಿ’’ ಎಂದು ಹೇಳಿ ಕರೆ ಸಂಪರ್ಕವನ್ನು ಕಡಿತಗೊಂಡಿತ್ತು. ಇದರಿಂದ ಗಲಿಬಿಲಿಗೊಂಡ ಬಾಳಿಗಾ ಮನೆಯವರು ಅಪಘಾತ ಆಗಿರುವ ಬಗ್ಗೆ ತಮ್ಮ ಸಂಬಂಧಿಕರ, ಸ್ನೇಹಿತರ ಮನೆಗೆ ವಿಚಾರಿಸಿದ್ದು, ಯಾವ ಅಪಘಾತವೂ ಸಂಭವಿಸಿಲ್ಲ ಎಂದು ದೃಢಪಟ್ಟಿತ್ತು. ಈ ಬಗ್ಗೆ ಬಾಳಿಗಾ ಮನೆಯವರು ಕೇಂದ್ರ ಉಪ ವಿಭಾಗದ ಎಸಿಪಿ ಉದಯ ನಾಯಕ್ ಅವರಿಗೆ ದೂರು ನೀಡಿದ್ದು, ಅವರು ಬರ್ಕೆ ಠಾಣೆಗೆ ಮಾಹಿತಿ ನೀಡಿದ್ದರು.

ಈ ಬಗ್ಗೆ ಬಂದ ಕರೆಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಮೊಬೈಲ್ ಫೋನ್ ಲಾಲ್‌ಬಾಗ್‌ನಲ್ಲಿರುವ ವೈದ್ಯರೊಬ್ಬರ ಪುತ್ರನಿಂದ ಬಂದಿತ್ತು. 6ನೆ ತರಗತಿಯಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿ ಬಾಳಿಗಾ ಮನೆಗೆ ಫೋನ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿದ್ಯಾರ್ಥಿ 4ನೆ ತರಗತಿಯಲ್ಲಿರುವಾಗ ಬಾಳಿಗಾ ಮನೆಗೆ ಟ್ಯೂಷನ್‌ಗಾಗಿ ತೆರಳುತ್ತಿದ್ದನೆಂದು ಹೇಳಲಾಗಿದ್ದು, ಈ ಸಂಖ್ಯೆ ಮೊಬೈಲ್‌ನಲ್ಲಿ ಉಳಿದಿದ್ದುದರಿಂದ ಬಾಲಕ ಫೋನ್ ಮಾಡಿ ಮಾತನಾಡಿದ್ದಾನೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News