ಕೃಷಿ, ಆರೋಗ್ಯ, ಶಿಕ್ಷಣ, ಕುಡಿಯುವ ನೀರಿನ ಆದ್ಯತೆ
ಕಾಸರಗೋಡು, ಮಾ.28: ಕೃಷಿ, ಆರೋಗ್ಯ, ಶಿಕ್ಷಣ, ಕುಡಿಯುವ ನೀರಿನ ಆದ್ಯತೆ ಮೇರೆಗೆ ಕಾಸರಗೋಡು ಜಿಪಂನ 2017-18ನೆ ಸಾಲಿನ ಮುಂಗಡಪತ್ರವನ್ನು ಮಂಗಳವಾರ ಮಂಡಿಸಲಾಯಿತು.
223.75 ಕೋ.ರೂ. ಆದಾಯ, 233.19 ಕೋ.ರೂ. ವೆಚ್ಚ ಹಾಗೂ 56 ಲಕ್ಷ ರೂ. ಮಿಗತೆ ಹೊಂದಿರುವ ಮುಂಗಡಪತ್ರವನ್ನು ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್ ಮಂಡಿಸಿದರು.
ಕೃಷಿ ವಲಯಕ್ಕೆ 5.2 ಕೋ.ರೂ. ಮೀಸಲಿಡಲಾಗಿದ್ದು, ಭತ್ತ ಕೃಷಿ ವಿಸ್ತರಣೆ, ಬಂಜರು ರಹಿತ ಜಿಲ್ಲೆ, ಕೃಷಿಕರಿಗೆ ಮಾರಾಟ ವ್ಯವಸ್ಥೆ, ಕ್ಷೀರ ವಲಯಕ್ಕೆ ವಿಶೇಷ ಯೋಜನೆಗಳು, ಬೀದಿ ನಾಯಿಗಳ ನಿಯಂತ್ರಣ ಕಾರ್ಯಗಳನ್ನು ಯೋಜನೆ ಒಳಗೊಂಡಿದೆ. ಆರೋಗ್ಯ ವಲಯಕ್ಕೆ 3.71 ಕೋ.ರೂ. ಮೀಸಲಿರಿಸಿದ್ದು, ಅಲೋಪತಿ, ಆಯುರ್ವೇದ, ಹೋಮಿಯೊ ವಿಭಾಗ ಆಸ್ಪತ್ರೆಗಳ ಅಭಿವೃದ್ಧಿಗೆ 4ಕೋ.ರೂ., ಕ್ಯಾನ್ಸರ್ ನಿಯಂತ್ರಣ ವಿಶೇಷ ಯೋಜನೆಗೆ 10 ಲಕ್ಷ ರೂ., ಎಚ್‌ಐವಿ, ಕ್ಷಯ ರೋಗಿಗಳ ಸಹಾಯಕ್ಕೆ 1 ಕೋ.ರೂ., ವೃದ್ಧರ ಕ್ಷೇಮಾಭಿವೃದ್ಧಿಗೆ 1.65 ಕೋ.ರೂ. ಮೀಸಲಿಡಲಾಗಿದೆ ಎಂದರು.
ಶಿಕ್ಷಣ ವಲಯಕ್ಕೆ 4.23 ಕೋ.ರೂ. ತೆಗೆದಿರಿಸಲಾಗಿದ್ದು, 10ನೆ ತರಗತಿ ಮಕ್ಕಳಿಗೆ ಸಹಪಾಠಿಯಾಗಿ ‘ಹಲೋ ಟೀಚರ್’, ಹೆಣ್ಣು ಮಕ್ಕಳ ಕ್ಷೇಮಕ್ಕಾಗಿ ‘ಪ್ರಬಲ’, ಮಕ್ಕಳ ಪೋಷಕರ ಕೌನ್ಸಿಲಿಂಗ್‌ಗಾಗಿ ‘ಶ್ರದ್ಧಾ’, ಕ್ರೀಡಾ ಪ್ರೊ.ಕುದಿಪ್ಪ್ ಮಿಷನ್ 2030 ಯೋಜನೆ ಜಾರಿಗೊಳಿಸಲಾಗಿದೆ. ಅಲ್ಲದೆ ರಸ್ತೆ ಅಭಿವೃದ್ಧಿಗೆ 33.2 ಕೋ.ರೂ. ಮೀಸಲಿಡಲಾಗಿದ್ದು, ಇದೇ ಪ್ರಥಮ ಬಾರಿಗೆ ಗ್ರಾಮಾಂತರ ರಸ್ತೆಗಳನ್ನು ಮೆಕಾ ಡ್ಯಾಂ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು ಎಂದವರು ತಿಳಿಸಿದ್ದಾರೆ.
ವಸತಿ ರಹಿತ ಜಿಲ್ಲೆಗೆ 9 ಕೋ.ರೂ. ತೆಗೆದಿರಿಸಲಾಗಿದ್ದು, ಇದರಲ್ಲಿ ಕುಡಿಯುವ ನೀರು, ಸಮಾಜ ಕಲ್ಯಾಣ, ವಿದ್ಯಾರ್ಥಿಗಳಿಗೆ ಅವಘಡ ವಿಮೆ, ಸಂಪೂರ್ಣ ಕಾಲನಿಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೃಷಿಕರಿಗೆ ಮಾರುಕಟ್ಟೆಯ ಹೊಸ ಸಾಧ್ಯತೆಗಳನ್ನು ಒದಗಿಸಲು ಸಹಕಾರಿ ಸಂಘಗಳು, ಕೃಷಿ ಇಲಾಖೆಯ ಇಕೋ ಶಾಪ್‌ಗಳನ್ನು ಹೊಂದಾಣಿಕೆ ಮಾಡಿಕೊಂಡು ವೆಬ್ ಆಧಾರಿತ ಇ. ಮಾರ್ಕೆಟ್ ಆರಂಭಿಸಲು ಜಿಪಂ ತೀರ್ಮಾನಿಸಲಾಗಿದೆ ಎಂದರು.
ಆಯುರ್ವೇದ ಆಸ್ಪತ್ರೆಯ ಸ್ತ್ರೀ ರೋಗ ಕ್ಲಿನಿಕ್ ‘ನಾಲ್‌ಋತು’ ಎಂಬ ಹೆಸರಿನಲ್ಲಿ ಬಂಜೆತನ ನಿವಾರಣಾ ಯೋಜನೆಗೆ ಮೊತ್ತ ಮೀಸಲಿರಿಸಲಾಗಿದ್ದು, ಎಂಡೋಸಲ್ಫಾನ್ ಸಂತ್ರಸ್ತರಿಗೆ ಹೊಸ ಯೋಜನೆಯನ್ನು ಆರಂಭಿಸಲಾಗಿದೆ. ‘ತನಲ್’ ವಸತಿ ಯೋಜನೆ ಜೊತೆಗೆ ಮೂಲಭೂತ ಸೌಲಭ್ಯದ ಜೊತೆ ಶಿಕ್ಷಣಕ್ಕಾಗಿ ‘ಸಹಜ’ ಯೋಜನೆ ಆರಂಭಿಸಲಾಗಿದೆ ಎಂದವರು ವಿವರಿಸಿದರು.
ಜಿಪಂ ಕಚೇರಿಯನ್ನು ಸಂಪೂರ್ಣ ವೈಫೈ ವಲಯವನ್ನಾಗಿ ಪರಿವರ್ತಿಸಲಾಗುವುದು. ಪ್ಲಸ್ ಟು ಸಮತ್ವ ಶಿಕ್ಷಣದಲ್ಲಿ ಕನ್ನಡವನ್ನು ಸೇರ್ಪಡೆ ಗೊಳಿಸಲಾಗುವುದು. ಕನ್ನಡ ಶಿಕ್ಷಣಕ್ಕಾಗಿ ಅನುದಾನ ಮೀಸಲಿಡಲಾಗಿದೆ. ಸಾಂಸ್ಕೃತಿಕ, ಸಾಹಿತ್ಯ ವಲಯದಲ್ಲಿ ಪಿ.ಕೇಳು ನಾಯರ್, ಕಯ್ಯಾರ ಕಿಂಞಣ್ಣ ರೈ ಅವರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ತಲಪಿಸಲು ಮಲಯಾಳ, ಕನ್ನಡ ಭಾಷೆಗಳಲ್ಲಿ ಸಂಶೋಧನಾ ಕೇಂದ್ರಗಳನ್ನು ತೆರೆಯಲು ಮುಂಗಡ ಪತ್ರದಲ್ಲಿ ಅನುದಾನ ಮೀಸಲಿರಿಸಲಾಗಿದೆ.
ಜಿಪಂ ಅಧ್ಯಕ್ಷ ಎ.ಜಿ.ಸಿ. ಬಶೀರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಚರ್ಚೆಯಲ್ಲಿ ಹರ್ಷಾದ್ ವರ್ಕಾಡಿ, ಕೆ .ಶ್ರೀಕಾಂತ್,ಇ.ಪದ್ಮಾವತಿ, ಎ.ಕೆ.ಎಂ.ಅಶ್ರಫ್ ಮೊದಲಾದವರು ಭಾಗವಹಿಸಿದ್ದರು.