×
Ad

ರೆಡ್ ಬಿಲ್ಡಿಂಗ್ ಲೇನ್ ರಸ್ತೆ ಅಗಲೀಕರಣ ಪ್ರಸ್ತಾಪ ಕೈ ಬಿಡಲು ಆಗ್ರಹ

Update: 2017-03-29 18:39 IST

ಮಂಗಳೂರು, ಮಾ.29: ನಗರದ ಕಂಕನಾಡಿ ವೆಲೆನ್ಸಿಯಾ ವಾರ್ಡ್‌ನ ರಾಷ್ಟ್ರೀಯ ಹೆದ್ದಾರಿಯಿಂದ ರೆಡ್ ಬಿಲ್ಡಿಂಗ್ ಒಳ ರಸ್ತೆಯನ್ನು 9 ಮೀಟರ್ ಅಗಲೀಕರಣಗೊಳಿಸುವ ಪ್ರಸ್ತಾಪವನ್ನು ಕೂಡಲೇ ಹಿಂಪಡೆಯಬೇಕೆಂದು ರೆಡ್ ಬಲ್ಡಿಂಗ್ ನಾಗರಿಕರ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯಿಸಿದೆ.

ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಮ್ಯಾಕ್ಸಿಮ್ ಡಿಸೋಝ ಅವರು, ರಸ್ತೆ ಅಗಲೀಕರಣಕ್ಕೆ ರೆಡ್ ಬಿಲ್ಡಿಂಗ್ ಲೇನ್ ನಾಗರಿಕರ ವಿರೋಧವಿದೆ ಎಂದರು.

ರೆಡ್ ಬಿಲ್ಡಿಂಗ್ ಲೇನ್‌ನಲ್ಲಿ ಸಣ್ಣ ಪುಟ್ಟ ಸುಮಾರು 150ಮನೆಗಳಿದ್ದು, ರಸ್ತೆ ಅಗಲೀಕರಣದಿಂದ ಲೇನ್‌ನಲ್ಲಿರುವ ಮನೆಗಳು ತೊಂದರೆಗೀಡಲಾಗಲಿವೆ. ನಾಗರಿಕರ ಆಕ್ಷೇಪಣೆಗಳ ಹೊರತಾಗಿಯೂ ವೆಲೆನ್ಸಿಯಾ ವಾರ್ಡ್‌ನ ಕಾರ್ಪೊರೇಟರ್ ಗ್ರೆಟ್ಟಾ ಆಶಾ ಡಿಸಿಲ್ವ ಅವರು ರಸ್ತೆ ಅಗಲೀಕರಣಕ್ಕೆ ಹೊರಟಿದ್ದಾರೆ ಎಂದು ಆರೋಪಿಸಿದರು. ಆಶಾ ಡಿಸಿಲ್ವ ಅವರು 2014ರಲ್ಲಿ ಮನೆಗಳಿಗೆ ಭೇಟಿ ನೀಡಿ ಒಳಚರಂಡಿ ನಿರ್ಮಿಸುವ ಸಲುವಾಗಿ ಸಹಿ ಪಡೆದುಕೊಂಡಿದ್ದರು. ಇದಕ್ಕೆ ಸುಮಾರು 20 ಮಂದಿ ಸಹಿ ನೀಡಿದ್ದರು. ಈ ಸಹಿಯನ್ನು ದುರುಪಯೋಗ ಪಡಿಸಿಕೊಂಡಿರುವ ಕಾರ್ಪೊರೇಟರ್‌ರವರು ರಸ್ತೆ ಅಗಲೀಕರಣಕ್ಕೆ ಅಲ್ಲಿನ ನಾಗರಿಕರು ತನಗೆ ಮನವಿ ಸಲ್ಲಿಸಿದ್ದಾರೆಂದು ಹೇಳಿದ್ದಾರೆ. ಈ ಬಗ್ಗೆ ಅಲ್ಲಿನ ನಾಗರಿಕರೊಂದಿಗೆ ಯಾವುದೇ ಸಭೆ ನಡೆಸಿಲ್ಲ. ರಸ್ತೆ ಅಗಲೀಕರಣದ ಬಗ್ಗೆ ಯಾವುದೇ ಮಾಹಿತಿಯಾಗಲಿ, ಮುನ್ಸೂಚನೆಯಾಗಲಿ ನೀಡಿಲ್ಲ ಎಂದು ಆರೋಪಿಸಿದರು.

ಸಂಘದ ಅಧ್ಯಕ್ಷ ವಿಶ್ವನಾಥ ಕೆ.ಡಿ. ಮಾತನಾಡಿ, ನಾಗರಿಕರಿಗೆ ವಿರುದ್ಧವಾಗಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳಬಾರದು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಮೀರಾ ಲೂಯಿಸ್, ಉಲ್ಲಾಸ್ ರೆಸ್ಕಿನಾ, ಥಿಯೋದರ್ ಲೋಬೊ, ಸುವೀರ್ ಐಸಾಕ್, ನಿರ್ಮಲಾ ಜೈನ್ ಪಾಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News