ತಣ್ಮೀರು ಬಾವಿ ಟ್ರೀ ಪಾರ್ಕ್‌ಗೆ ಬೆಂಕಿ: 7 ಲಕ್ಷ ರೂ. ಮೌಲ್ಯದ ಸೊತ್ತು ಬೆಂಕಿಗಾಹುತಿ

Update: 2017-03-29 16:11 GMT

ಮಂಗಳೂರು, ಮಾ.29: ತಣ್ಣೀರು ಬಾವಿಯಲ್ಲಿರುವ ಟ್ರೀ ಪಾರ್ಕ್‌ಗೆ ಬೆಂಕಿ ತಗುಲಿದ ಪರಿಣಾಮ ಕಚೇರಿಯಲ್ಲಿದ್ದ ಸುಮಾರು 7 ಲಕ್ಷ ರೂ. ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಬುಧವಾರ ನಡೆದಿದೆ.

ಮಂಗಳೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ್ವರ ಅವರು ಮನೆಯಲ್ಲಿದ್ದ ಸಂದರ್ಭದಲ್ಲಿ ಬುಧವಾರ ಬೆಳಗ್ಗೆ ಸುಮಾರು 8 ಗಂಟೆ ಹೊತ್ತಿಗೆ ಪಾರ್ಕ್‌ನ ಗಿಡಗಳಿಗೆ ನೀರು ಬಿಡುವ ಸಿಬ್ಬಂದಿಯೊಬ್ಬರು ವೆಂಟಕೇಶ್ವರ ಅವರಿಗೆ ಕರೆ ಮಾಡಿ ಟ್ರೀ ಪಾರ್ಕ್‌ನಲ್ಲಿರುವ ಕಚೇರಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಕೂಡಲೇ ವೆಂಕಟೇಶ್ವರ ಅವರು ಟ್ರೀ ಪಾರ್ಕ್ ಕಚೇರಿಗೆ ಬಂದು ನೋಡಿದಾಗ ಮರದ ಕಟ್ಟಡ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ಕಚೇರಿಯಲ್ಲಿದ್ದ ಗ್ರಂಥಾಲಯ, ಅದರಲ್ಲಿದ್ದ ಪುಸ್ತಕ, 10 ಮರದ ಚಯರ್, ಮರದ ಕೌಂಟರ್, ಶೌಚಾಲಯ, ಅದರಲ್ಲಿದ್ದ ಮರ ಕೊಯ್ಯುವ ಗರಗಸ, ಡ್ರಿಲ್ಲಿಂಗ್ ಮಿಷನ್, ಕಟ್ಟಿಂಗ್ ಮಿಷನ್ ಇತ್ಯಾದಿ ಬೆಂಕಿಯಿಂದ ಸಂಪೂರ್ಣ ಉರಿದು ನಾಶವಾಗಿವೆ. ಈ ಮರದ ಕಟ್ಟಡದಲ್ಲಿದ್ದ ಚಯರ್, ಟೇಬಲ್ ಇತ್ಯಾದಿ ಸೊತ್ತುಗಳು, ಗ್ರಂಥಾಲಯದ್ದಲ್ಲಿದ್ದ 60 ಸಾವಿರ ರೂ.ಮೌಲ್ಯದ 300 ಪುಸ್ತಕಗಳು ಹೀಗೆ ಒಟ್ಟು 7 ಲಕ್ಷ ನಷ್ಟ ಉಂಟಾಗಿದೆ ಎಂದು ವೆಂಕಟೇಶ್ವರ ಪಣಂಬೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News