ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ನಿಂದ ತಾಲೂಕು ಕಚೇರಿ ಮಾರ್ಚ್

Update: 2017-03-29 15:41 GMT

ಮಂಜೇಶ್ವರ, ಮಾ.29:  ಕೇರಳವು ತನ್ನ ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಬರಗಾಲ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಪರಿಹಾರ ಒದಗಿಸಬೇಕಾದ ಸರಕಾರವು ದೀರ್ಘ ನಿದ್ರೆಯಲ್ಲಿ ಮುಳುಗಿದೆಯೆಂದು ಡಿಸಿಸಿ ಅಧ್ಯಕ್ಷ  ಹಕೀಂ ಕುನ್ನಿಲ್ ಟೀಕಿಸಿದ್ದಾರೆ.

ಹನಿ ನೀರಿಲ್ಲದೆ ಜನತೆ ಸಂಕಷ್ಟಪಡುತ್ತಿರುವಾಗ ಸರಕಾರದ ಮಂತ್ರಿಗಳು ಅನಗತ್ಯ ವಿವಾದಗಳನ್ನು ಸೃಷ್ಟಿಸುವ ತವಕದಲ್ಲಿದ್ದಾರೆ. ಕೊಳವೆ ಬಾವಿ ಕೊರೆಯಲು ನಿಯಂತ್ರಣ ಹೇರಿದ ಸರಕಾರವು ಕುಡಿಯುವನೀರು ಒದಗಿಸಲು ಮಾರ್ಚ್ ಅಂತ್ಯದವರೆಗೂ ಮುಂದಾಗದಿರುವುದು ಆಕ್ಷೇಪಾರ್ಹ. ನದಿ ನೀರು ಬಳಸಿ ಕೃಷಿ ನಡೆಸುವುದಕ್ಕೂ ಈ ಸರಕಾರ ಅಡ್ಡಿಪಡಿಸುತ್ತಿದೆ. ನದಿ ನೀರು ಬಳಸಿ ಕೃಷಿ ನಡೆಸಲು ಪ್ರೋತ್ಸಾಹಿಸುವ ಬದಲು ಕಿರುಕುಳ ನೀಡುವುದು ಸರಿಯಲ್ಲ.

ಸರಕಾರವು ಕೃಷಿಕರಿಗೆ ಪರ್ಯಾಯ ನೀರಾವರಿ ವ್ಯವಸ್ಥೆ ಮಾಡಿ ಈ ನಿಯಂತ್ರಣಗಳನ್ನು ತಂದಿದ್ದರೆ ಒಪ್ಪಿಕೊಳ್ಳಬಹುದಾಗಿತ್ತು. ಅಧಿಕಾರದ ಅಹಂಕಾರದಲ್ಲಿ ದಿನಕ್ಕೊಂದು ಕಾನೂನು ರೂಪಿಸುವ ಈ ಸರಕಾರವು ಜನತೆಗೆ ಹೊರೆಯಾಗಿ ಮಾರ್ಪಟ್ಟಿದೆ. ಮಾರಕ ಎಂಡೋಸಲ್ಫಾನ್ ಪ್ರಯೋಗದ ಬಲಿಪಶುಗಳಾಗಿ  ಜೀವಚ್ಛವಗಳಂತೆ ಕಾಲಕಳೆಯುತ್ತಿರುವ ಜನತೆಯ ಹೆಸರಿನಲ್ಲಿ ರಾಜಕೀಯ ಲಾಭಪಡೆದು ಅಧಿಕಾರಕ್ಕೇರಿದ ಸರಕಾರವು ಆ ಬಡಪಾಯಿಗಳನ್ನೂ ಮರೆತು ವಂಚನೆಯೆಸಗಿದೆ. ಜಿಲ್ಲೆಯ ಅಭಿವೃದ್ಧಿಯಲ್ಲೂ ಸರಕಾರದ ಮಲತಾಯಿ ಧೋರಣೆ ಮುಂದುವರಿಯುತ್ತಿದೆ. ಭೀಕರ ಕ್ಷಾಮಕ್ಕೆ ಸಮಾನವಾದ ಪರಿಸ್ಥಿತಿ ಜಿಲ್ಲೆಯಲ್ಲಿ ಉದ್ಭವಿಸಿದ್ದು, ಅಪಾರ ಕೃಷಿಹಾನಿ ಸಂಭವಿಸಿದೆ. 

ಎಂಡೋಸಲ್ಫಾನ್ ಪೀಡಿತರಿಗೆ ಸಹಾಯಹಸ್ತ ನೀಡುವಲ್ಲಿ ಸರಕಾರದ ವೈಫಲ್ಯ, ಬರಪರಿಹಾರ ಕಾರ್ಯಗಳನ್ನು ನಡೆಸುವಲ್ಲಿ ಸರಕಾರದ ಉದಾಸೀನ ಧೋರಣೆಗಳನ್ನು ಪ್ರತಿಭಟಿಸಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಮಂಜೇಶ್ವರ ತಾಲೂಕು ಕಚೇರಿ ಮುಂದೆ ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮುಖ್ಯ ಪ್ರಭಾಷಣೆಗೈದರು. ಮಂಡಲ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತ್ಯನ್ ಸಿ.ಉಪ್ಪಳ, ಸತ್ಯನಾರಾಯಣ ಕಲ್ಲೂರಾಯ, ಮಜಾಲು ಮುಹಮ್ಮದ್, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಹಮೀದ್ ಕೋಡಿಯಡ್ಕ, ದಾಮೋದರ ಮಾಸ್ತರ್, ಹಮೀದ್  ಕೋಡಿಯಡ್ಕ, ಇಬ್ರಾಹಿಂ ಐಆರ್ ಡಿಪಿ, ಸದಾಶಿವ ಕೆ, ಗುರುವಪ್ಪ ಮಂಜೇಶ್ವರ, ನವೀನ್ ಮಂಗಲ್ಪಾಡಿ, ಓಂ ಕೃಷ್ಣ, ನಾಗೇಶ ಮಂಜೇಶ್ವರ, ಸದಾಶಿವ, ಕೆ.ಜೆ.ಮೊಹಮ್ಮದ್, ರಂಜಿತ್ ಮಂಜೇಶ್ವರ, ಫ್ರಾನ್ಸಿಸ್,  ಜನಪ್ರತಿನಿಧಿಗಳಾದ ಮಮತಾ ದಿವಾಕರ, ಸಂಷಾದ್ ಶುಕೂರ್, ಶಶಿಕಲಾ, ಸುನಿತಾ ಡಿ ಸೋಜ, ಪ್ರಸಾದ್ ರೈ, ಹೇಮಲತಾ, ಚಂದ್ರಾವತಿ, ಸೀತಾ.ಡಿ, ಯುವ ಕಾಂಗ್ರೆಸ್ ಮುಖಂಡರಾದ ಶರೀಫ್ ಅರಿಬೈಲು, ಇಕ್ಬಾಲ್ ಕಳಿಯೂರು, ಶರ್ಮಿಳಾ ಡಿ.ಸೋಜ, ಝಕರಿಯಾ, ಇರ್ಷಾದ್ ಮಂಜೇಶ್ವರ, ಹಮೀದ್ ಕಣಿಯೂರು, ಸುಧಾಕರ ಉಜಿರೆ ಮುಂತಾದವರು ಭಾಗವಹಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News