×
Ad

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ: ಐವನ್ ಡಿಸೋಜ

Update: 2017-03-30 13:25 IST

ಮಂಗಳೂರು, ಮಾ.30: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.

ಗುರುವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗು ಮನಪಾ ಆಯುಕ್ತರ ಜೊತೆ ಚರ್ಚಿಸಲಾಗಿದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದರು.

ಎಂಆರ್‌ಪಿಎಲ್, ಎಂಎಸ್‌ಇಝೆಡ್, ಎಂಸಿಎಫ್ ಕಡಿಮೆ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಲು ಸೂಚಿಸಲಾಗಿದೆ. ಮನಪಾ ವ್ಯಾಪ್ತಿಯೊಳಗೆ ನೀರು ಪೂರೈಕೆಗೆ 2 ಕೋ.ರೂ. ಮತ್ತು ಜಿಲ್ಲೆಯ ನೀರು ಪೂರೈಕೆ ಮತ್ತು ಪೈಪ್‌ಲೈನ್ ದುರಸ್ತಿಗಾಗಿ 6 ಕೋ.ರೂ. ಬಿಡುಗಡೆಗೊಳಿಸಲಾಗುವುದು ಎಂದು ಐವನ್ ಡಿಸೋಜ ಹೇಳಿದರು.

ಜಿಲ್ಲೆಯ 5,868 ಬೋರ್‌ವೆಲ್ ಮತ್ತು 1,565 ವೆಂಟೆಡ್ ಡ್ಯಾಂಗಳಿವೆ. ಆ ಪೈಕಿ 427 ಡ್ಯಾಂಗಳ ದುರಸ್ತಿಗೆ 2.14 ಕೋ.ರೂ. ಬಿಡುಗಡೆಯಾಗಿದೆ. ಈಗಾಗಲೇ 174 ಡ್ಯಾಂಗಳ ದುರಸ್ತಿ ಕಾರ್ಯ ಆರಂಭವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಮಾಜಿ ಮೇಯರ್ ಕೆ.ಅಶ್ರಫ್, ನಾಗೇಂದ್ರ ಕುಮಾರ್, ಹೇಮನಾಥ್ ಶೆಟ್ಟಿ ಪುತ್ತೂರು, ಸ್ಟೀಫನ್ ಮರೋಳಿ, ಅಬೂಬಕರ್ ಜೆಪ್ಪು, ಮಹೇಶ್ ಕೋಡಿಕಲ್, ಹಬೀಬ್ ಕಣ್ಣೂರು, ಮನುರಾಜ್ ಎಂ.ಪಿ., ಶಶಿಕಾಂತ್ ಶೆಟ್ಟಿ, ಸತೀಶ್ ಪೆಂಗಲ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News