ಓಲಾ,ಉಬೇರ್ ಕ್ಯಾಬ್ ವಿರುದ್ಧ ರಿಕ್ಷಾ ಚಾಲಕರ ಧರಣಿ
ಮಂಗಳೂರು, ಮಾ.30: ಯಾವುದೇ ಪರವಾನಿಗೆ ಇಲ್ಲದೆ ಆ್ಯಪ್ ಆಧಾರಿತವಾಗಿ ಕಾರ್ಯನಿರ್ವಹಿಸುವ ಓಲಾ ಮತ್ತು ಉಬೇರ್ ಕ್ಯಾಬ್ ಹಾಗು ಇನ್ನಿತರ ಆನ್‌ಲೈನ್ ಕ್ಯಾಬ್ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ಗುರುವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳೂರು ನಗರ ಆಟೋ ಚಾಲಕರ ಮಾಲಕರ ಒಕ್ಕೂಟ ಧರಣಿ ನಡೆಸಿತು. ಅದಕ್ಕೂ ಮೊದಲು ನಗರದ ಬಲ್ಮಠ ಶಾಂತಿ ನಿಲಯದಿಂದ ಜಿಲ್ಲಾಧಿಕಾರಿ ಕಚೇರಿಗೆ ರಿಕ್ಷಾ ಚಾಲಕರು ಮೆರವಣಿಗೆ ನಡೆಸಿದರು.
ನಗರದಲ್ಲಿ ಜುಗುನ್, ಓಲಾ, ಉಬೇರ್ ಕ್ಯಾಬ್‌ಗಳು ಕಾರ್ಯಾಚರಿಸುತ್ತಿವೆ. ಆದರೆ, ಅದಕ್ಕೆ ಯಾವುದೇ ಪರವಾನಿಗೆಯನ್ನು ಪಡೆದಿಲ್ಲ. ಇದು ಮಾಹಿತಿ ಹಕ್ಕು ಕಾಯ್ದೆಯ ಮೂಲಕವೂ ಬಹಿರಂಗಗೊಂಡಿದೆ. ಈಗಾಗಲೇ ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ. ಇದೀಗ ಜಿಲ್ಲಾಡಳಿತದ ಗಮನ ಸೆಳೆಯಲು ಧರಣಿ ನಡೆಸಲಾಗುತ್ತಿದ್ದು, ಸೂಕ್ತ ಕ್ರಮ ಜರಗಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಧರಣಿಯಲ್ಲಿ ರಿಕ್ಷಾ ಚಾಲಕ-ಮಾಲಕರ ಪರ ಕಾರ್ಯನಿರ್ವಹಿಸುವ ವಿವಿಧ ಸಂಘಟನೆಗಳ ಮುಖಂಡರಾದ ಅರುಣ್ ಕುಮಾರ್, ಯಾದವ ಪೂಜಾರಿ, ಅಶೋಕ್ ಶೆಟ್ಟಿ, ಮುಹಮ್ಮದ್ ಇರ್ಫಾನ್, ಶೇಖರ್ ದೇರಳಕಟ್ಟೆ, ಸುಭಾಷ್ ಕಾವೂರು, ಅಬೂಬಕರ್ ಸುರತ್ಕಲ್, ಜೆರಾಲ್ಡ್ ಡಿಕುನ್ಹ ಮತ್ತಿತರರು ಪಾಲ್ಗೊಂಡಿದ್ದರು.