ಮೊಬೈಲ್ ಟವರ್ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ

Update: 2017-03-30 11:56 GMT

ಮೂಡುಬಿದಿರೆ,ಮಾ.30 : ಹೌದಾಲ್ ಪರಿಸರದಲ್ಲಿ ನಿರ್ಮಿಸಲುದ್ದೇಶಿಸಿರುವ ಮೊಬೈಲ್ ಟವರ್‌ನ ವಿರುದ್ಧ ಸ್ಥಳೀಯ ಗ್ರಾಮಸ್ಥರು ಶಿರ್ತಾಡಿಯ ಗ್ರಾಮ ಪಂಚಾಯತ್ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೌದಾಲ್‌ನ ಅಂಗನವಾಡಿ ಬಳಿಯೇ ಇರುವ ಖಾಸಗಿ ಜಾಗವೊಂದರಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಏರ್‌ಟೆಲ್ ಕಂಪೆನಿಯವರು ಸಿದ್ಧತೆ ನಡೆಸಿದ್ದು, ಇದನ್ನರಿತ ಸ್ಥಳೀಯರು ಪಂಚಾಯತ್ ವಿರುದ್ಧ ಆಕ್ರೋಶಿತರಾಗಿದ್ದಾರೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಆರಂಭಗೊಂಡ ಪ್ರತಿಭಟನೆಯಲ್ಲಿ ಪಂಚಾಯತ್ ಅಧ್ಯಕ್ಷೆ ಹಾಗೂ ಪಿಡಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಟವರ್ ಅನ್ನು ಜನವಸತಿ ಇಲ್ಲದೆಡೆ ಸ್ಥಾಪಿಸಿ ಎಂದು ಒತ್ತಾಯಿಸಿದರು.

 ಪ್ರತಿಭಟನಾಕಾರರಿಗೆ ಪಂಚಾಯತ್ ಆವರಣದೊಳಕ್ಕೆ ಪ್ರವೇಶಿಸದಂತೆ ಗೇಟು ಹಾಕಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಈ ಸಂದರ್ಭ ಮೈಕ್‌ನಲ್ಲಿ ಘೋಷಣೆಗಳನ್ನು ಕೂಗುವುದಕ್ಕೆ ಆರಂಭಿಸಿದ ಕೂಡಲೇ ಸ್ಥಳಕ್ಕೆ ಬಂದ ಪಂಚಾಯತ್ ಅಧ್ಯಕ್ಷ ಲತಾ ಹೆಗ್ಡೆ ಹತ್ತಿರದಲ್ಲಿಯೇ ಇರುವ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಮೈಕ್ ಬಂದ್ ಮಾಡಲು ಸೂಚಿಸುವಂತೆ ಪೊಲೀಸರಿಗೆ ತಿಳಿಸಿದರು. ಇದರಿಂದ ಉದ್ರಿಕ್ತಗೊಂಡ ಪ್ರತಿಭಟನಾಕಾರರು ನಿಮಗೆ ಅನಧಿಕೃತವಾಗಿ ಲಂಚದ ಆಮಿಷಕ್ಕಾಗಿ ಅಂಗನವಾಡಿಯ ಬಳಿಯೇ ಮೊಬೈಲ್ ಟವರ್‌ಗೆ ಅನುಮತಿ ನೀಡಲಿಕ್ಕಾಗುತ್ತದೆ. ಆಗ ಇಲ್ಲದ ಮಕ್ಕಳ ಮೇಲಿನ ಮಮಕಾರ ಈಗೆಲ್ಲಿಂದ ಬಂತು?ಎಂದು ಪ್ರಶ್ನಿಸಿದರು. ಇದರಿಂದ ನಿರುತ್ತರರಾದ ಅಧ್ಯಕ್ಷೆ ತಕ್ಷಣವೇ ಸ್ಥಳ ಖಾಲಿ ಮಾಡಿ ಪಂಚಾಯತ್‌ನ ತಮ್ಮ ಕಚೇರಿ ಸೇರಿದರು.

 ನಂತರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಹೋರಾಟಗಾರ, ದ.ಕ. ಜಿಲ್ಲಾ ರೈತ ಪ್ರಾಂತದ ಕಾರ್ಯದರ್ಶಿ ಯಾದವ ಶೆಟ್ಟಿ, ಸಣ್ಣ ಸಣ್ಣ ಮಕ್ಕಳು ಕಲಿಯುತ್ತಿರುವ ಅಂಗನವಾಡಿಯ ಬದಿಯಲ್ಲಿಯೇ ಮೊಬೈಲ್ ಟವರ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿರುವ ಗ್ರಾಮ ಪಂಚಾಯತ್ ಗ್ರಾಮಸ್ಥರ ವಿರೋಧ ಕಟ್ಟಿಕೊಂಡಿದೆ. ಕೂಡಲೇ ಅನುಮತಿಯನ್ನು ರದ್ದುಗೊಳಿಸಿ ಜನರ ಪ್ರಾಣ ಕಾಪಾಡಬೇಕಾಗಿದೆ. ಗ್ರಾ.ಪಂ. ಅಧ್ಯಕ್ಷೆ ಹಾಗೂ ಆಡಳಿತ ಮಂಡಳಿಯು ಈ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕುಎಂದರು.

  ನಂತರ ಮಾತನಾಡಿದ ಮಹಿಳಾ ಹೋರಾಟಗಾರ್ತಿ ರಮಣಿ, ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷೆ ಓರ್ವ ಮಹಿಳೆಯಾಗಿದ್ದು ಟವರ್ ನಿರ್ಮಾಣ ಉದ್ದೇಶಿಸಿರುವ ಜಾಗದ ಹತ್ತಿರದ ನಿವಾಸಿಗಳಲ್ಲೂ ಕೂಡಾ ಅಧಿಕ ಸಂಖ್ಯೆಯಲ್ಲಿ ಮಹಿಳೆಯರಿದ್ದು ತಮ್ಮಂತೆಯೇ ಅವರು ಕೂಡಾ ಬದುಕುವ ಹಕ್ಕನ್ನು ಹೊಂದಿದ್ದಾರೆ. ಅವರ ಆರೋಗ್ಯವನ್ನು ಹಾಗೂ ಅಲ್ಲಿನ ಮಕ್ಕಳು ಹಾಗೂ ಹಿರಿಯರ ಆರೋಗ್ಯವನ್ನು ಲೆಕ್ಕಿಸದೇ ಇದೀಗ ಅಹಂಕಾರದ ವರ್ತನೆಯನ್ನು ತೋರಿಸುತ್ತಿರುವ ಅಧ್ಯಕ್ಷೆಯ ವರ್ತನೆಯನ್ನು ನಾವು ಖಂಡಿಸುತ್ತೇವೆ. ಒಂದೊಮ್ಮೆ ಒಂದು ವಾರದೊಳಗೆ ಟವರ್ ಅನುಮತಿಯನ್ನು ರದ್ದುಗೊಳಿಸದೇ ಇದ್ದಲ್ಲಿ ಪಂಚಾಯತ್ ಆವರಣದೊಳಗೆ ಅಮರನಾಂತ ಉಪವಾಸ ಸತ್ಯಾಗ್ರಹ ಕೂರುತ್ತೇವೆಎಂದರು.

ವಿಚಿತ್ರ ನಿಯಮದ ವಿರುದ್ಧವೂ ಆಕ್ರೋಶ : ಶಿರ್ತಾಡಿ ಗ್ರಾಮ ಪಂಚಾಯತ್‌ನಲ್ಲಿ ಒಂದು ವಿಚಿತ್ರ ನಿಯಮ ಜಾರಿಯಲ್ಲಿದೆ! ಅದೇನೆಂದರೆ ಯಾರಾದರೂ ಯಾವುದಾದರೂ ವಿಷಯದ ಮೇಲೆ ಪಂಚಾಯತ್ ವಿರುದ್ಧ ಪ್ರತಿಭಟನೆ ಮಾಡಲು ಉದ್ದೇಶಿಸಿದರೆ ಅದೇ ಪಂಚಾಯತ್‌ನಲ್ಲಿ ಅನುಮತಿ ಪಡೆಯಬೇಕು! ಇದನ್ನು ಅಲ್ಲಿನ ಗ್ರಾಮ ಪಂಚಾಯತ್ ಸಭೆಯಲ್ಲಿಯೇ ತೀರ್ಮಾನಿಸಿ ಜಾರಿಗೆ ತರಲಾಗಿದೆ. ಎಲ್ಲೂ ಇಲ್ಲದ ಈ ರೀತಿಯ ನಿಯಮದಿಂದಾಗಿ ಪಂಚಾಯತ್ ವಿರುದ್ಧ ಪ್ರತಿಭಟನೆ ಮಾಡಬೇಕಾದವರು ಅನುಮತಿ ಕೇಳಿದರೆ ಕೊಡುತ್ತಾರೆಂದು ಅಂದುಕೊಳ್ಳುವುದು ದುಬಾರಿಯಾಗುತ್ತದೆ! ಗುರುವಾರ ನಡೆದ ಪ್ರತಿಭಟನೆಯಲ್ಲಿ ಈ ಬಗ್ಗೆಯೂ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಹೀಗಾಗಿ ಗುರುವಾರ ನಡೆದ ಗ್ರಾಮಸ್ಥರ ಪ್ರತಿಭಟನೆ ಪಂಚಾಯತ್‌ನಿಂದ ಅನುಮತಿ ಪಡೆಯದೇಯೆ ನಡೆಸಲಾಗಿದೆ. ಇದಕ್ಕೂ ಮುಂಚೆ ಈ ನಿರ್ಣಯದ ವಿರುದ್ಧ ಪಂಚಾಯತ್ ಆವರಣದೊಳಗೆ ಕಾರ್ಮಿಕ ಹೋರಾಟಗಾರ ಸುದತ್ತ ಜೈನ್ ಮೂರು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು.

10 ಬಾರಿ ಅಧ್ಯಕ್ಷೆಯನ್ನು ಭೇಟಿಯಾದ ಎಎಸ್‌ಐ : ಪ್ರತಿಭಟನೆಯ ನಂತರ ಮನವಿ ನೀಡುವುದಕ್ಕಾಗಿ ಅಧ್ಯಕ್ಷೆಯನ್ನು ಸ್ಥಳಕ್ಕೆ ಕರೆಯುವಂತೆ ಪ್ರತಿಭಟನಾಕಾರರು ಎಎಸ್‌ಐ ಅವರಲ್ಲಿ ಕೇಳಿಕೊಂಡರು. ಅದಕ್ಕಾಗಿ ಗ್ರಾ.ಪಂ. ಕಚೇರಿಯೊಳಗೆ ಹೋದ ಎಎಸ್‌ಐ ಅಧ್ಯಕ್ಷೆಯನ್ನು ಸ್ಥಳಕ್ಕೆ ಬರುವಂತೆ ತಿಳಿಸಿದರು. ಆದರೆ ಅದಕ್ಕೊಪ್ಪದ ಅಧ್ಯಕ್ಷೆ ಲತಾ ಹೆಗ್ಡೆ ತನಗೆ ಮೀಟಿಂಗ್ ಇದೆ, ಅದು ಮುಗಿದ ಮೇಲೆ ಬರುವುದಾಗಿ ಎಎಸ್‌ಐ ಅವರನ್ನು ವಾಪಾಸು ಕಳುಹಿಸಿದರು.

 ಪ್ರತಿಭಟನಾಕಾರರ ಬಳಿ ಬಂದ ಎಎಸ್‌ಐ ಅವರನ್ನು ಸಮಾಧಾನಿಸಿ ಯಾರಾದರೂ ಇಬ್ಬರು ಒಳಗೆ ಬಂದು ಮನವಿ ನೀಡುವಂತೆ ಹೇಳಿದರು. ಆದರೆ ಅದಕ್ಕೊಪ್ಪದ ಪ್ರತಿಭಟನಾಕಾರರು ಚುನಾವಣೆಯ ಸಂದರ್ಭದಲ್ಲಿ ಓಟು ಬೇಡಿಕೊಂಡು ಮನೆಬಾಗಿಲಿಗೆ ಬರುವ ಅಧ್ಯಕ್ಷೆ ಇದೀಗ ಜನರ ಬಳಿಗೆ ಬರುವುದಕ್ಕೆ ಯಾಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಪಟ್ಟುಹಿಡಿದರು. ನಂತರ ಒಟ್ಟು 10ಕ್ಕಿಂತ ಹೆಚ್ಚುಬಾರಿ ಸಂಧಾನಕಾರರಾಗಿ ತೆರಳಿದ ಎಎಸ್‌ಐಯ ಒಂದೇ ಒಂದು ಮಾತಿಗೂ ಬೆಲೆ ಕೊಡದೇ ಸತಾಯಿಸಿದ ಅಧ್ಯಕ್ಷೆಯ ದರ್ಪದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರಗಳನ್ನು ಕೂಗಿದರು. ಮಹಿಳೆಯರು ಮಕ್ಕಳಿದ್ದ ಈ ಪ್ರತಿಭಟನೆಯಲ್ಲಿ ಬಿಸಿಲಿನ ಝಳ ಲೆಕ್ಕಿಸದೇ ಅಲ್ಲೇ ನೆಲದಲ್ಲಿ ಕೂತುಕೊಂಡು ಪ್ರತಿಭಟನೆಯನ್ನು ಮುಂದುವರಿಸಿದರು. ಸಭೆ ಮುಗಿದ ಬಳಿಕ ಉಪಾಧ್ಯಕ್ಷ ರಾಜೇಶ್ ಸುವರ್ಣ ಅವರನ್ನು ಪ್ರತಿಭಟನಾಕಾರರ ಬಳಿಗೆ ಕಳುಹಿಸಿದ ಅಧ್ಯಕ್ಷೆ ತಾನು ಮನವಿ ಸ್ವೀಕರಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News