ಮನಪಾ ಸಭೆ : ಬಹಿರಂಗಗೊಂಡ ಕಾಂಗ್ರೆಸ್ ನ ಬಣ ರಾಜಕೀಯ!
ಮಂಗಳೂರು, ಮಾ.30: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಂದು ಕಾಂಗ್ರೆಸ್ ಪಕ್ಷ ನಡುವಿನ ಬಣ ರಾಜಕೀಯ ಬಹಿರಂಗ ಪ್ರಕರಣ ನಡೆಯಿತು. ಪ್ರಸಕ್ತ ಸಾಲಿನ ಮೇಯರ್ ಆಯ್ಕೆಯ ಸಂದರ್ಭದಿಂದಲೇ ಆರಂಭಗೊಂಡಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರ ನಡುವಿನ ಅಸಮಾಧಾನ ಇಂದು ಪಾಲಿಕೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಹಿರಂಗವಾಗಿ ಸ್ಫೋಟಗೊಂಡಿತು.
ಪ್ರಸಕ್ತ ಸಾಲಿನ ಮೇಯರ್ ಆಯ್ಕೆ ಕಾಂಗ್ರೆಸ್ ಪಕ್ಷದ ಪಾಲಿಗೆ ಸವಾಲಾಗಿ ಪರಿಣಮಿಸಿತ್ತು. ಕೊನೆಗೆ ಇದೇ ಪ್ರಥಮ ಬಾರಿಗೆ ಮೇಯರ್ ಆಯ್ಕೆಗೆ ಪಕ್ಷದೊಳಗೆ ಗುಪ್ತ ಮತದಾನಕ್ಕೂ ಕಾರಣವಾಗಿತ್ತು. ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಆಂತರಿಕವಾಗಿ ನಡೆದ ಗುಪ್ತ ಮತದಾನದಲ್ಲಿ ಕವಿತಾ ಸನಿಲ್ ಅವರು ಸಮೀಪದ ಪ್ರತಿಸ್ಪರ್ಧಿ ಪ್ರತಿಭಾ ಕುಳಾಯಿ ಅವರನ್ನು ಒಂದು ಮತದಿಂದ ಸೋಲಿಸಿ ಮೇಯರ್ ಸ್ಥಾನಕ್ಕೆ ಆಯ್ಕೆಗೊಂಡಿದ್ದರು. ಇದು ಸದಸ್ಯರ ನಡುವೆ ಎರಡು ಬಣಗಳಿಗೂ ಕಾರಣವಾಗಿತ್ತು. ಇಂದು ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿಯವರು ತಮ್ಮನ್ನು ಮೇಯರ್‌ರವರು ಕಡೆಗಣಿಸಿದ್ದಾರೆಂದು ವಿರೋಸಿ ಧರಣಿ ಕುಳಿತ ಪ್ರಕರಣವನ್ನೇ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ನ ಒಂದು ಬಣದ ಸದಸ್ಯರು ಪ್ರತಿಪಕ್ಷದ ಸದಸ್ಯರ ಜತೆ ಸೇರಿ ಮೇಯರ್ ಕವಿತಾ ಸನಿಲ್ ವಿರುದ್ಧ ಅಸಮಾಧಾನವನ್ನು ಹೊರಹಾಕಿದರು.
ಉಪ ಮೇಯರ್ ರಜನೀಶ್ ಸೇರಿದಂತೆ, ಪ್ರತಿಭಾ ಕುಳಾಯಿ ಹಾಗೂ ಅವರನ್ನು ಬೆಂಬಲಿಸಿದ್ದ ಬಹುತೇಕ ಕಾಂಗ್ರೆಸ್‌ನ ಸದಸ್ಯರು ನಾಗವೇಣಿ ಜತೆಯಲ್ಲಿ ಸಭಾತ್ಯಾಗ ಮಾಡುವ ಮೂಲಕ ಕಾಂಗ್ರೆಸ್ ಬಣ ರಾಜಕೀಯ ಗೋಚರಿಸಲ್ಪಟ್ಟಿತು.ಆಡಳಿತ ಪಕ್ಷವಾದ ಕಾಂಗ್ರೆಸ್ ಸದಸ್ಯರು ಪರಿಷತ್ ಸಭಾಂಗಣದಲ್ಲಿಯೇ ಪರಸ್ಪರ ದೂಷಿಸುವ ಘಟನೆಗೂ ಪಾಲಿಕೆ ಸಭಾಂಗಣ ಸಾಕ್ಷಿಯಾಯಿತು. ಈ ಸಂದರ್ಭ ಹಾಜರಿದ್ದ ಶಾಸಕರಾದ ಜೆ.ಆರ್.ಲೋಬೊ, ಮೊಯ್ದೀನ್ ಬಾವ ಗಾದೂ ವಿಧಾನ ಪರಿಷತ್ ಸಚೇತಕ ಐವನ್ ಡಿಸೋಜಾರವರ ನಡುವೆಯೇ ಕಾಂಗ್ರೆಸ್‌ನ ಸದಸ್ಯರು ಸಭೆಯಿಂದ ತೆರಳಿದರು. ಬಳಿಕ ನಡೆದ ಸಭೆಯಲ್ಲಿ ಶಾಸಕ ಜೆ.ಆರ್. ಲೋಬೋ ಉಪಸ್ಥಿತರಿದ್ದರೂ, ಉಪ ಮೇಯರ್ ಸೇರಿದಂತೆ ಆಡಳಿತ ಪಕ್ಷದ ಕೆಲ ಸದಸ್ಯರು ಹೊರಗುಳಿಯುವ ಮೂಲಕ ಭಿನ್ನಮತವನ್ನು ಸಾಬೀತುಪಡಿಸಿದರು.