ಕಾಣಿಯೂರು ಬಿಜೆಪಿ ಸಾಧನ ಸಮಾವೇಶ
ಕಡಬ, ಮಾ.30.ಕಾಂಗ್ರೆಸ್ ಮುಕ್ತ ಕರ್ನಾಟಕ್ಕೆ ಬಿಜೆಪಿ ಕಾರ್ಯಕರ್ತರು ಪಣತೊಟ್ಟಿದ್ದು, ತಳಮಟ್ಟದಿಂದಲೇ ಬಿಜೆಪಿಯ ಜನಪರ ಯೋಜನೆ, ಸಾಧನೆ ಬಗ್ಗೆ ಪ್ರಚಾರಪಡಿಸಲಾಗುತ್ತಿದೆ. ಕಾಣಿಯೂರಿನಂತಹ ಗ್ರಾಮಿಣ ಭಾಗದಲ್ಲಿ ಸ್ಥಳಿಯ ಕಾಂಗ್ರೆಸ್ ನಾಯಕರುಗಳು ಬಿಜೆಪಿ ಜನಪ್ರತಿನಿಧಿಗಳನ್ನು ಅವಮಾನಿಸುವ ಮಾತುಗಳನ್ನು ಬಹಿರಂಗವಾಗಿ ಹೇಳುತ್ತಿರುವುದು ಕಾಂಗ್ರೆಸ್ಸಿಗರ ಕೀಳು ಮಟ್ಟದ ರಾಜಕೀಯವನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ಮುಂದಾಳು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಅವರು ಕಾಣಿಯೂರು ಗ್ರಾಮದ ನಾಣಿಲದಲ್ಲಿ ನಡೆದ ಬಿಜೆಪಿ ಸಾಧನ ಸಮಾವೇಶದಲ್ಲಿ ಮಾತನಾಡಿದರು. ಕಾರ್ಯಕ್ರಮವೊಂದರಲ್ಲಿ ಸ್ಥಳಿಯ ಕಾಂಗ್ರೆಸ್ಸಿಗರೋರ್ವರು ರಾಷ್ಟ್ರ ರಾಜಕಾರಣದಲ್ಲಿ ಜನಮನ್ನಣೆ ಗಳಿಸಿರುವ ನಾಯಕಿ ಶೋಭಾ ಕರಂದ್ಲಾಜೆ ಹಾಗೂ ಸ್ಥಳಿಯ ಬಿಜೆಪಿ ಜನಪ್ರತಿನಿಧಿಗಳನ್ನು ಕೀಳು ಮಟ್ಟದ ಪದಗಳಿಂದ ನಿಂದಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಈ ಭಾಗದಲ್ಲಿ ಕಳೆದ ಕೆಲವು ಸ್ಥಳಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಈ ಹತಾಶೆಯಲ್ಲಿ ಬಿಜೆಪಿಗರನ್ನು ನಿಂದಿಸುತ್ತಿದ್ದಾರೆ. ಮುಂದೆಯೂ ಈ ಭಾಗದಲ್ಲಿ ಬಿಜೆಪಿಯ ವಿಜಯದ ನಾಗಲೋಟ ಮುಂದುವರಿಯಲಿದೆ. ಕಾಂಗ್ರೆಸ್ಸಿಗರ ಕೀಳು ಮಟ್ಟದ ರಾಜಕೀಯವೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಬಿಜೆಪಿ ಸುಳ್ಯ ಮಂಡಲ ಸಮಿತಿ ಸದಸ್ಯ ಗಣೇಶ್ ಉದನಡ್ಕ ಮಾತನಾಡಿ, ಈ ಭಾಗದಲ್ಲಿ ಬಿಜೆಪಿ ಆಡಳಿತದಿಂದ ಹಲವಾರು ಅಭಿವೃದ್ದಿ ಕಾರ್ಯಗಳು ನಡೆದಿದೆ. ಆದರೂ ಈ ಭಾಗದ ಕಾಂಗ್ರೆಸ್ಸಿನ ಹಿರಿಯರೊಬ್ಬರು ಅಜ್ಞಾನದಿಂದ ಸಂಸದೆ ಶೊಭಾ ಕರಂದ್ಲಾಜೆ ಊರಿಗೆ ಅನುದಾನ ನೀಡಿಲ್ಲ, ಸ್ಥಳಿಯಾಡಳಿತ ಅಭಿವೃದ್ದಿ ಕಾರ್ಯ ಮಾಡುತ್ತಿಲ್ಲವೆಂದು ಹೇಳುತಿದ್ದಾರೆ. ಬೈತಡ್ಕ-ಗುಜ್ಜರ್ಮೆ ರಸ್ತೆ ಅಭಿವೃದ್ದಿಪಡಿಸಲು ಕಾಂಗ್ರೆಸ್ ಸರಕಾರವಿದ್ದರೂ, ಕಾಂಗ್ರೆಸ್ ನಾಯಕರಿಗೆ ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ಸಿಗರ ಟೀಕೆಗಳನ್ನು ಕಾರ್ಯಕರ್ತರು ಮನಗಾಣದೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಕೆ, ಸದಸ್ಯೆ ಲಲಿತಾ ಈಶ್ವರ, ಕಾಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೀತಮ್ಮ ಖಂಡಿಗ, ಸವಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ಬಿ.ಕೆ., ಬಿಜೆಪಿ ಬೆಳಂದೂರು ಶಕ್ತಿ ಕೇಂದ್ರ ಅಧ್ಯಕ್ಷ ಧರ್ಮೇಂದ್ರ ಕಟ್ಟತ್ತಾರು, ಮಂಡಲ ಸಮಿತಿ ಸದಸ್ಯ ದಿನೇಶ್ ಮೆದು, ಬಿಜೆಪಿ ಮುಖಂಡರಾದ ಲಕ್ಷ್ಣಣ ಕರಂದ್ಲಾಜೆ, ಸೀತಾರಾಮ ಖಂಡಿಗ, ಧನಂಜಯ ಕೇನಾಜೆ, ಪರಮೇಶ್ವರ ಗೌಡ ಮಿಯೋಲ್ಪೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪದ್ಮನಾಭ ಅಂಬುಲ ಸ್ವಾಗತಿಸಿ, ತಿಮ್ಮಪ್ಪ ಪೂಜಾರಿ ಎಣ್ಮೂರು ವಂದಿಸಿದರು. ಶಿವರಾಮ ರೈ ಪಿಜಕ್ಕಳ ನಿರೂಪಿಸಿದರು.