ಎ.2 ರಂದು ತೊಕ್ಕೊಟ್ಟುವಿನಲ್ಲಿ ನೂತನ ಬಿಜೆಪಿ ಕಾರ್ಯಾಲಯ ಉದ್ಘಾಟನೆ
ಉಳ್ಳಾಲ,ಮಾ.30: ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಹಾಗೂ ನೂತನ ಬಿಜೆಪಿ ಕಾರ್ಯಾಲಯದ ಉದ್ಘಾಟನೆ ಸಮಾರಂಭ ಎ.2 ರಂದು ಬೆಳಿಗ್ಗೆ 10.30ಕ್ಕೆ ತೊಕ್ಕೊಟ್ಟುವಿನಲ್ಲಿ ನಡೆಯಲಿದೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ತಿಳಿಸಿದ್ದಾರೆ.
ಅವರು ತೊಕ್ಕೊಟ್ಟುವಿನಲ್ಲಿ ಗುರುವಾರ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಿಜೆಪಿಯ ಮಂಗಳೂರು ವಿಧಾನಸಭಾ ಕ್ಷೇತ್ರದ ನೂತನ ಕಾರ್ಯಾಲಯವು ತೊಕ್ಕೊಟ್ಟು ಹೈಲ್ಯಾಂಡ್ ಕಾಂಪ್ಲೆಕ್ಸ್ ನ 3ನೇ ಮಹಡಿಯಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಬಳಿಕ ತೊಕ್ಕೊಟ್ಟು ಬಸ್ಸು ನಿಲ್ದಾಣ ಸಮೀಪ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವು ಜರಗಲಿದೆ ಎಂದ ಅವರು ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಸಲುವಾಗಿ ಪ್ರತಿ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. 25 ಗ್ರಾಮಗಳು, 1 ನಗರಸಭೆ ಹಾಗೂ 1ಪಟ್ಟಣ ಪಂಚಾಯತಿನ ಎಲ್ಲಾ ಬೂತ್ ಸಮಿತಿ ಸದಸ್ಯರು, ಹಾಗೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜಿಲ್ಲೆಯಲ್ಲಿ ಮಾದರಿ ಕಾರ್ಯಾಲಯ ಆಗಿ ಕಾರ್ಯಾಚರಿಸಲಿದೆ ಎಂದ ಅವರು ಉಪಚುನಾವಣೆ ನಿಮಿತ್ತ ರಾಜ್ಯ ನಾಯಕರು ಬರಲು ಅನಾನುಕೂಲವಾಗಿರುವುದರಿಂದ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂದರು.
ಅವ್ಯವಹಾರ ಮತ್ತು ಹಣಹಂಚಿಕೆ ಮಾನದಂಡವಾಗಿ ಕಾರ್ಯಾಚರಣೆ : ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ ಕ್ಷೇತ್ರದ ಶಾಸಕರು ಗುಂಡ್ಲುಪೇಟೆ ಉಪಚುನಾವಣೆ ವೇಳೆ ಹಣ ಹಂಚಿಕೆ ನಡೆಸಿರುವ ವಿಚಾರ ಬಹಿರಂಗವಾಗಿದೆ. ಅಲ್ಲದೆ ಸಚಿವರ ಅವಧಿಯಲ್ಲಿ ನಡೆಸಿರುವ ಅವ್ಯವಹಾರಗಳನ್ನು ಹೊರಗೆಳೆದು ಅದನ್ನು ಮಾನದಂಡವಾಗಿ ಬಳಸಿಕೊಂಡು ಕ್ಷೇತ್ರ ಕಾರ್ಯಾಲಯ ಕಾರ್ಯಾಚರಿಸಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸುಷ್ಮಾ ಜನಾರ್ಧನ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಛಾದ ಕಾರ್ಯದರ್ಶಿ ಮುನೀರ್ ಬಾವ, ಸಂಜೀವ ಶೆಟ್ಟಿ ಅಂಬ್ಲಮೊಗರು, ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಕ್ಷೇತ್ರ ಯುವ ಮೋರ್ಚಾದ ಅಧ್ಯಕ್ಷ ಸುಜೀತ್ ಮಾಡೂರು, ಕ್ಷೇತ್ರ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್, ತಾ.ಪಂ ಮಾಜಿ ಸದಸ್ಯೆ ರಾಜೀವಿ ಕೆಂಪುಮಣ್ಣು, ಸುರೇಂದ್ರ ಶೆಟ್ಟಿ, ಯಶವಂತ್ ಅಮೀನ್ , ಆಶ್ರಫ್ ಹರೇಕಳ, ಆನಂದ ಶೆಟ್ಟಿ ತೊಕ್ಕೊಟ್ಟು, ಸುರೇಂದ್ರ ಶೆಟ್ಟಿ ಉಳ್ಳಾಲ್ ಉಪಸ್ಥಿತರಿದ್ದರು.