ಮಿತ್ತಕೋಡಿ: ಗೂಡಂಗಡಿಗೆ ದುಷ್ಕರ್ಮಿಗಳಿಂದ ಬೆಂಕಿ
ಕೊಣಾಜೆ,ಮಾ.30: ಪಜೀರು ಗ್ರಾಮದ ಮಿತ್ತಕೋಡಿ ಎಂಬಲ್ಲಿ ಗೂಡಂಗಡಿಗೆಯೊಂದಕ್ಕೆ ದುಷಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಅಂಗಡಿಯ ಛಾವಣಿ ಸಹಿತ ಸೊತ್ತುಗಳು ನಾಶವಾದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಕಂಬಳಪದವು-ಮಿತ್ತಕೋಡಿ ನಡುವೆ ಹೊಸದಾಗಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಾಣವಾದ ರಸ್ತೆಯ ಮಿತ್ತಕೋಡಿ ಅರ್ಕಾನ ಕ್ರಾಸ್ ಎಂಬಲ್ಲಿ ಸ್ಥಳೀಯ ಯುವಕರು ಸೇರಿ ಇತ್ತೀಚೆಗೆ ಹೊಸದಾಗಿ ಗೂಡಂಗಡಿಯೊಂದನ್ನು ತೆರೆದಿದ್ದರು. ಈ ಗೂಡಂಗಡಿಗೆ ಬೆಂಕಿ ನೀಡಲು ಎರಡು ದಿನಗಳ ಹಿಂದೆ ದುಷ್ಕರ್ಮಿಗಳು ಯತ್ನಿಸಿ ವಿಫಲರಾಗಿದ್ದು, ಬುಧವಾರ ರಾತ್ರಿಮತ್ತೆ ದುಷ್ಕೃತ್ಯ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಡರಾತ್ರಿ ವೇಳೆ ಕೃತ್ಯ ನಡೆದಿದ್ದು ವಿಷಯ ತಿಳಿದ ಬಳಿಕ ಆಸುಪಾಸಿನವರು ಬಂದು ಬೆಂಕಿ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯಿಂದ ಅಂಗಡಿಯ ಛಾವಣಿ, ಒಳಗಿದ್ದ ಪೀಠೋಪಕರಣ ಸಹಿತ ಸುಮಾರು 50 ಸಾವಿರ ಮೌಲ್ಯದ ಸೊತ್ತು ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಅಂಗಡಿ ಮಾಲೀಕ ಇಸಾಕ್ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.