ಜನ ಔಷಧಿ ಗುಣಮಟ್ಟದ ಮೇಲೆ ಸಂಶಯ ಬೇಡ : ಶಾಸಕಿ ಶಕುಂತಳಾ ಶೆಟ್ಟಿ
ಪುತ್ತೂರು,ಮಾ.30: ಉಚಿತ ಅಥವಾ ದರ ಕಡಿತದಲ್ಲಿ ಯಾವುದೇ ವಸ್ತುಗಳು ವಸ್ತುಗಳು ದೊರೆತರೆ ಅದರ ಬಗ್ಗೆ ಸಂಶಯ ಮತ್ತು ಭಯ ಪಡುವುದು ಸಹಜ ವಿಚಾರವಾಗಿದೆ. ಆದರೆ ಜನ ಸಾಮಾನ್ಯರಿಗೆ ಉತ್ತಮ ರೀತಿಯಲ್ಲಿ ವೈದ್ಯಕೀಯ ಸೌಲಭ್ಯ ದೊರಕುವ ನಿಟ್ಟಿನಲ್ಲಿ ಸರ್ಕಾರ ಜನ ನೌಷಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಕಡಿಮೆ ದರದಲ್ಲಿ ಉತ್ತಮ ಔಷಧಿಯನ್ನು ವಿತರಣೆ ಮಾಡುತ್ತಿದೆ. ಜನೌಷಧಿಯ ಗುಣಮಟ್ಟದ ಮೇಲೆ ಯಾರಿಗೂ ಸಂಶಯ, ಭಯ ಬೇಡ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಬುಧವಾರ ಪುತ್ತೂರಿನಲ್ಲಿ ಆರಂಭಿಸಲಾದ ಜನ ನೌಷಧಿ ಕೇಂದ್ರವನ್ನು ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರಯಲ್ಲಿ ಲೋಕಾರ್ಪಣೆಗೊಳಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉತ್ತಮ ಯೋಜನೆಯನ್ನು ಜಾರಿಗೆ ತಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಜನ ಔಷಧಿ ಕೇಂದ್ರದಿಂದಲೇ ಔಷಧಿ ಪಡೆದುಕೊಳ್ಳಬೇಕು ಎಂದು ಕಾನೂನನ್ನು ಜಾರಿಗೊಳಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರೋಗ್ಯ ಖಾತೆ ಸಚಿವ ರಮೇಶ್ ಅವರಿಗೆ ಶಾಸಕರು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿ ಶಾಸಕಿ ಅವರು ಸರ್ಕಾರಿ ಆಸ್ಪತ್ರೆ ಕಟ್ಟದ ಮೇಲ್ಚಾವಣಿ ರಚನೆಗೆ ವೈದಾಧಿಕಾರಿಗಳ ಬೇಡಿಕೆಯಂತೆ ರೂ. 5 ಲಕ್ಷ ಮಂಜೂರು ಮಾಡಿಸಿದ್ದೇನೆ. ಇನ್ನೂ 5 ಲಕ್ಷ ರೂಪಾಯಿ ಬೇಕಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ನೆರವು ನೀಡಬೇಕು ಎಂದರು.
ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಪುತ್ತೂರಿನ ಸರ್ಕಾರಿ ಆಸ್ಪತ್ರೆ 200 ಬೆಡ್‌ಗೆ ಮೇಲ್ದರ್ಜೆಗೇರಿಸಬೇಕಾಗಿದೆ. ಇದೀಗ 100 ಬೆಡ್‌ಗಳ ಆಸ್ಪತ್ರೆಯಾಗಿರುವ ಸರ್ಕಾರಿ ಆಸ್ಪತ್ರೆಯನ್ನು ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಗುವುದು. ಬಳಿಕ ಮೆಡಿಕಲ್ ಕಾಲೇಜು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಭಾರತೀಯ ಜನ ಔಷಧಿ ಕೇಂದ್ರವನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ಸಮಾಜ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಔಷಧಿ ದೊರೆತು ಆರೋಗ್ಯವಂತನಾಗಿರಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೆಟಕುವ ಬೆಲೆಯಲ್ಲಿ ಔಷಧಿ ವಿತರಸುವ ಯೋಜನೆ ಜಔಷಧಿ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಪ್ರತಿಯೊಬ್ಬರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ ಭಾರತೀಯ ಜನ ಔಷಧಿ ಕೇಂದ್ರಕ್ಕೆ ಸರಕಾರ ರಿಯಾಯಿತಿ ದರದಲ್ಲಿ ಔಷಧಿ ನೀಡುತ್ತಿದೆ. ಈಗ 615 ಬಗೆಯ ವಿವಿಧ ಔಷಧಿಗಳನ್ನು ಸರಕಾರ ಪೂರೈಕೆ ಮಾಡುತ್ತದೆ. ರಾಜ್ಯದಲ್ಲಿ 200 ಮಳಿಗೆಗಳನ್ನು ತೆರೆಯಲು ಸರಕಾರ ರೆಡ್ ಕ್ರಾಸ್ ಸಂಸ್ಥೆಗೆ ಅವಕಾಶ ಕೊಟ್ಟಿದೆ. ಸೇವಾ ಉದ್ದೇಶದಿಂದ ರೆಡ್‌ಕ್ರಾಸ್ ಸಂಸ್ಥೆ ಈ ಕಾರ್ಯವನ್ನು ನಡೆಸುತ್ತಿದೆ ಎಂದು ಹೇಳಿದರು.
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಸಾದ್ ಕೌಶಲ್,ತಾ.ಪಂ. ಸದಸ್ಯ ಭವಾನಿ ಚಿದಾನಂದ, ನಗರ ಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಮಾತನಾಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರದೀಪ್ ಕುಮಾರ್ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ರೈ, ಪುತ್ತೂರು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
ಭಾರತೀಯ ರಡ್ ಕ್ರಾಸ್ ಸಂಸ್ಥೆ ಪುತ್ತೂರು ಘಟಕದ ಸಭಾಪತಿ ಆಸ್ಕರ್ ಆನಂದ್ ಸ್ವಾಗತಿಸಿದರು. ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರದೀಪ್ ಕುಮಾರ್ ವಂದಿಸಿದರು. ರೆಡ್ ಕ್ರಾಸ್ ಸಂಸ್ಥೆ ಪುತ್ತೂರು ಘಟಕದ ಸದಸ್ಯ ಪ್ರೊ. ಬಿ.ಜೆ. ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ರಾಮಕೃಷ್ಣರವರು ಭಾರತೀಯ ಜನ ಔಷಧಿ ಕೇಂದ್ರ ಪುತ್ತೂರು ಇದರ ಉಸ್ತವಾರಿಯಾಗಿದ್ದು, ಶ್ರೀದುರ್ಗಾರವರು ಫಾರ್ಮಸಿಸ್ಟ್ ಆಗಿರುತ್ತಾರೆ.
ಜೆ.ಸಿ.ಐ. ಪುತ್ತೂರು ಮತ್ತು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಪುತ್ತೂರು ಘಟಕ ಕೈಗೊಂಡ ರಕ್ತದಾನಿಗಳ ಜಾಲತಾಣ (ಬ್ಲಡ್ ಫಾರ್ ಆಲ್)ವನ್ನು ಇದೇ ಸಂದರ್ಭದಲ್ಲಿ ಶಾಸಕಿ ಶಕುಂತಳಾ ಶೆಟ್ಟಿಯವರು ಉದ್ಘಾಟಿಸಿದರು. ಈ ಯೋಜನೆಯಲ್ಲಿ ರಕ್ತದಾನಿಗಳ ಮಾಹಿತಿ ಜಾಲ ತಾಣದಲ್ಲಿ ಲಭ್ಯವಿರುತ್ತದೆ. ರಕ್ತದ ಅಗತ್ಯವುಳ್ಳವರು ಜಾಲ ತಾಣದಲ್ಲಿ ನೋಡಿ ನೇರವಾಗಿ ಆ ವ್ಯಕ್ತಿಗೆ ಅಥವಾ ಸಂಘ ಸಂಸ್ಥೆಯನ್ನು ಸಂಪರ್ಕಿಸಿ ರಕ್ತವನ್ನು ಪಡೆದುಕೊಳ್ಳಲು ಅವಕಾಶವಿದೆ ಎಂದು ಪ್ರೊ. ಬಿ.ಜೆ. ಸುವರ್ಣ ತಿಳಿಸಿದರು.
ಭಾರತ ಸರ್ಕಾರ ಮತ್ತು ಕರ್ನಾಟಕ ಸರಕಾರದ ಯೋಜನೆಯಾದ ‘ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ’ವನ್ನು ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪುತ್ತೂರು ಘಟಕ ಆರಂಭಿಸಲಾಗಿದೆ.