ಪುತ್ತೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆ - ತಾಲೂಕಿನಲ್ಲಿ 5688 ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿ
ಪುತ್ತೂರು,ಮಾ.30: ತಾಲೂಕಿನಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 2934 ವಿದ್ಯಾರ್ಥಿಗಳು ಮತ್ತು 2754 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 5688 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ತಾಲೂಕಿನ 12 ಕೇಂದ್ರಗಳಲ್ಲಿ ಬಿಗು ಭದ್ರತೆಯೊಂದಿಗೆ ಗುರುವಾರ ಪರೀಕ್ಷೆ ಆರಂಭಗೊಂಡಿದೆ.
ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಸಂತ ಫಿಲೋಮಿನಾ ಪ್ರೌಢಶಾಲೆ ಪುತ್ತೂರು, ಸೈಂಟ್ ವಿಕ್ಟರ್ಸ್ ಪ್ರೌಢಶಾಲೆ ಪುತ್ತೂರು, ವಿವೇಕಾಂದ ಪ್ರೌಢಶಾಲೆ ತೆಂಕಿಲ, ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ, ನೆಲ್ಯಾಡಿಯ ಸೈಂಟ್ ಜಾರ್ಜ್ ಪದವಿ ಪೂರ್ವ ಕಾಲೇಜು, ಸವಣೂರು ವಿದ್ಯಾರಶ್ಮಿ ವಿದ್ಯಾಲಯ, ಸರಕಾರಿ ಪದವಿ ಪೂರ್ವ ಕಾಲೇಜು ಕುಂಬ್ರ, ಗಜಾನನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಈಶ್ವರಮಂಗಲ, ಸರಕಾರಿ ಪದವಿಪೂರ್ವ ಕಾಲೇಜು ಕಡಬ, ಕ್ನಾನಾಯ ಜ್ಯೋತಿ ವಿದ್ಯಾಕೇಂದ್ರ ಕಡಬ, ಶ್ರೀ ರಾಮಕುಂಜೇಶ್ವರ ಪ.ಪೂ. ಕಾಲೇಜು ರಾಮಕುಂಜ ಇಲ್ಲಿ ಗುರುವಾರ ಪರೀಕ್ಷೆ ಆರಂಭಗೊಂಡಿತು.
ತಾಲೂಕಿನ 12 ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದು, ಬಿಗಿ ಭದ್ರತಾ ವ್ಯವಸ್ಥೆಯ ನಡುವೆ ಪರೀಕ್ಷೆ ಆರಂಭಗೊಂಡಿತು. 12 ಮುಖ್ಯ ಅಧೀಕ್ಷಕರು, 12 ಉಪ ಮುಖ್ಯ ಅಧೀಕ್ಷಕರು, 12 ಪರೀಕ್ಷಾ ಅಭಿರಕ್ಷಕರು, 255 ಮೇಲ್ವಿಚಾರಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಲ್ಲದೆ ಜಿಲ್ಲಾಡಳಿತ ಪ್ರತೀ ಪರೀಕ್ಷಾ ಕೇಂದ್ರಕ್ಕೆ ವೀಕ್ಷಕರನ್ನು ಕಳುಹಿಸಿ ಕೊಡುತ್ತಿದೆ. ಇದರೊಂದಿಗೆ ಜಾಗೃತ ದಳಗಳೂ ಕೆಲಸ ಮಾಡುತ್ತಿವೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ತುರ್ತು ಸ್ಪಂದನೆಗಾಗಿ ಆರೋಗ್ಯ ಇಲಾಖೆಯೊಂದಿಗೆ ಸಂಪರ್ಕ ಇಟ್ಟುಕೊಳ್ಳಲಾಗಿದ್ದು, ಇಲಾಖೆಯು ಇದಕ್ಕಾಗಿ ಸಿಬ್ಬಂದಿ ನೇಮಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.