ಅಂಧರ ಏಷ್ಯನ್ ಚೆಸ್: ಪ್ರಶಸ್ತಿಯತ್ತ ಕಿಶನ್ ದಾಪುಗಾಲು
ಮಣಿಪಾಲ, ಮಾ.30: ನಾಲ್ಕು ಬಾರಿಯ ರಾಷ್ಟ್ರೀಯ ‘ಎ’ ಚೆಸ್ ಚಾಂಪಿಯನ್ ಕರ್ನಾಟಕದ ಕಿಶನ್ ಗಂಗೊಳ್ಳಿ ಅವರು ಇಲ್ಲಿ ನಡೆದಿರುವ ಅಂಧರ ಐಬಿಸಿಎ ಏಷ್ಯನ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವತ್ತ ದಾಪುಗಾಲು ಹಾಕಿದ್ದಾರೆ. ಇನ್ನು ಒಂದು ಸುತ್ತಿನ ಪಂದ್ಯ ಉಳಿದಿರುವಂತೆ ಅವರು ತನ್ನ ಸಮೀಪದ ಪ್ರತಿಸ್ಪರ್ಧಿಗಳಿಗಿಂತ ಒಂದು ಅಂಕದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಬ್ರೈಲಿ ಚೆಸ್ ಅಸೋಸಿಯೇಷನ್ ವತಿಯಿಂದ ಮಣಿಪಾಲ ವಿವಿ ಆಶ್ರಯದಲ್ಲಿ ಮಣಿಪಾಲ ಕೆಎಂಸಿಯ ಡಾ.ಟಿಎಂಎ ಪೈ ಹಾಲ್‌ನಲ್ಲಿ ನಡೆದಿರುವ ಟೂರ್ನಿಯ ಏಳನೇ ಸುತ್ತಿನ ಪಂದ್ಯದ ಕೊನೆಗೆ ಕಿಶನ್ ಅವರು ಒಟ್ಟು 6.5 ಅಂಕಗಳನ್ನು ಸಂಗ್ರಹಿಸಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ನಾಳೆ ತನ್ನ ಅಂತಿಮ ಸುತ್ತಿನ ಪಂದ್ಯವನ್ನು ಕನಿಷ್ಠ ಡ್ರಾಗೊಳಿಸಿದರೂ ಚಾಂಪಿಯನ್ ಪಟ್ಟವನ್ನು ಅಲಂಕರಿಸಲಿದ್ದಾರೆ.
ಏಳನೇ ಸುತ್ತಿನ ಪಂದ್ಯದ ಕೊನೆಗೆ ಭಾರತದವರೇ ಆದ ಮಕ್ವಾನ್ ಅಶ್ವಿನ್ ಕೆ. ಹಾಗೂ ಸೌಂದರ್ಯ ಕುಮಾರ್ ಪ್ರದಾನ ತಲಾ 5.5 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಎಂಟನೇ ಹಾಗೂ ಕೊನೆಯ ಸುತ್ತಿನ ಪಂದ್ಯಗಳು ನಾಳೆ ಬೆಳಗ್ಗೆ 9 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಸಂಜೆ 4:00ಗಂಟೆ ಸಮಾರೋಪ ಸಮಾರಂಭ ನಡೆಯಲಿದೆ.
ಗುರುವಾರ ನಡೆದ ಪಂದ್ಯದಲ್ಲಿ ಕಿಶನ್ ಗಂಗೊಳ್ಳಿ (6.5) ಅವರು ಭಾರತ ದವರೇ ಆದ ಯುಧ್‌ಜಿತ್ ಡೇ (4) ಜಯ ದಾಖಲಿಸಿದರು. ಬುಧವಾರ ನಡೆದ ಆರನೇ ಸುತ್ತಿನ ಪಂದ್ಯದಲ್ಲಿ ಭಾರತದ ಸ್ವಪ್ನೀಲ್ ಶಾ ಅವರು ಕಿಶನ್‌ರ ವಿರುದ್ಧ 60ನೇ ನಡೆಯಲ್ಲಿ ಡ್ರಾ ಸಾಧಿಸುವ ಮೂಲಕ ಎದುರಾಳಿಯ ಸತತ ವಿಜಯದ ದಾಪುಗಾಲಿಗೆ ಕಡಿವಾಣ ಹಾಕಿದ್ದರು.
ಇಂದು ಆರಂಭದಿಂದಲೇ ಆಕ್ರಮಣಕ್ಕಿಳಿದ ಕಿಶನ್‌ರ ಎದುರು ಯುಧ್‌ಜಿತ್ ತನ್ನ ಪಡೆಗಳನ್ನು ಉಳಿಸಿಕೊಳ್ಳಲು ಸಾದ್ಯವಾಗದೇ 32ನೇ ನಡೆಯಲ್ಲಿ ಸೋಲೊಪ್ಪಿಕೊಂಡರು.
ಎರಡನೆ ಬೋರ್ಡ್‌ನಲ್ಲಿ ಅಶ್ವಿನ್ ಕೆ. (5.5) ಹಾಗೂ ಸೌಂದರ್ಯ ಕುಮಾರ್ ಪ್ರಧಾನ್ (5.5) ಅವರು ಮೇಲುಗೈಗೆ ಜಿದ್ದಾಜಿದ್ದಿನ ಹೋರಾಟ ನಡೆಸಿ ಕೊನೆಗೂ 70ನೇ ನಡೆಯಲ್ಲಿ ಸಮಬಲದ ತೀರ್ಪಿಗೆ ಒಪ್ಪಿಕೊಂಡರು.
ಬುಧವಾರ ಆರನೇ ಸುತ್ತಿನ ಪಂದ್ಯದಲ್ಲಿ ಟೂರ್ನಿಯಲ್ಲಿ ಭಾಗವಹಿಸಿರುವ ಅತ್ಯಧಿಕ ಫಿಡೆ ಶ್ರೇಯಾಂಕಿತ ಆಟಗಾರಾದ ಬಾಂಗ್ಲಾದೇಶದ ಹುಸೈನ್ ಎಜಾಝ್‌ರನ್ನು ಸೋಲಿಸಿ ಸೌಂದರ್ಯ ಕುಮಾರ್ ಅಚ್ಚರಿ ಫಲಿತಾಂಶಕ್ಕೆ ಕಾರಣವಾಗಿದ್ದರೆ, ಅಶ್ವಿನ್ ಕೆ. ಅವರು ಸೋಮೆಂದರ್ ಬಿ.ಎಲ್. ವಿುದ್ಧ ಸುಲಭದ ಜಯ ದಾಖಲಿಸಿದ್ದರು.
ಪ್ರಾರಂಭಿಕ ಸುತ್ತಿನ ಪಂದ್ಯಗಳಲ್ಲಿ ಭಾರೀ ಭರವಸೆ ಹುಟ್ಟಿಸಿದ್ದ ಬಾಂಗ್ಲಾದೇಶದ ಹುಸೈನ್ ಎಜಾಝ್ (4) ಅವರು ಇಂದು ಭಾರತದ ಆರ್ಯನ್ ಬಿ.ಜೋಶಿ (4.5) ಕೈಯಲ್ಲಿ ಮತ್ತೊಂದು ಪರಾಭವದ ಕಹಿ ಅನುಭವಿಸಿದರು. ಸ್ವಪ್ನೀಲ್ ಶಾ (4.5) ಅವರು ಮಾರಿಮುತ್ತು ಕೆ. (4) ವಿರುದ್ಧ ಡ್ರಾಕ್ಕೆ ತೃಪ್ತಿಪಟ್ಟು ನಿರಾಶೆ ಅನುಭವಿಸಿದರು. ಭಾರತದ ಕೃಷ್ಣ ಉಡುಪ (4.5) ಅವರು ಪಿಲಿಪ್ಲೈನ್ಸ್‌ನ ರೋಡಾಲ್ಫ್ ಸರ್ಮಿಂಟೊ (3) ವಿರುದ್ಧ ಜಯ ಪಡೆದರು.