ನಿಗದಿತ ಸಮಯಕ್ಕೆ ಪೂರ್ಣಗೊಳ್ಳದ ಕಾಮಗಾರಿ: ಸೊರಕೆ ಅಸಮಾಧಾನ
ಪಡುಬಿದ್ರಿ,ಮಾ.30: ಬಿಡುಗಡೆಯಾದ ಅನುದಾನದಲ್ಲಿ ನಿಗಧಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಹೊಸ ಅನುದಾನಕ್ಕೆ ಬೇಡಿಕೆ ಸಲ್ಲಿಸುವುದಾದರೂ ಹೇಗೆ ಎಂದು ಶಾಸಕ ವಿನಯಕುಮಾರ್ ಸೊರಕೆ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ನಡೆದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಕಳೆದ ಅವಧಿಯಲ್ಲಿ ಬಿಡುಗಡೆಯಾದ ರೂ. 5 ಕೋಟಿಯ ಕೆರೆ ಅಭಿವೃದ್ಧಿ ಹಾಗೂ ಎಸ್‌ಸಿ-ಎಸ್‌ಟಿ ಮನೆ ನಿರ್ಮಾಣ ಕಾಮಗಾರಿಗಳು ವಿಳಂಬವಾಗಿದೆ ಎಂದರು.
ಅಧಿಕಾರಿಗಳೇ ಹೊಣೆ: ಜನ ಕುಡಿಯುವ ನೀರಿಗೆ ಬೇಡಿಕೆ ಇಟ್ಟಲ್ಲಿ ಅಧಿಕಾರಿಗಳು ಅದನ್ನು ಸಮರ್ಪಕವಾಗಿ ನಿಭಾಯಿಸಬೇಕು, ಇಲ್ಲವಾದಲ್ಲಿ ಅದಕ್ಕೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಶಾಸಕ ವಿನಯಕುಮಾರ್ ಸೊರಕೆ ಎಚ್ಚರಿಕೆ ನೀಡಿದರು. ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಮೂಳೂರು ಹಾಗೂ ಮಲ್ಲಾರಿನಲ್ಲಿ ನೀರಿನ ಸಮಸ್ಯೆ ಇದೆ. ಮೂಳೂರಿನಲ್ಲಿ ಜಿ.ಪಂ. ಅನುದಾನದಲ್ಲಿ ನಿರ್ಮಿಸಿದ ಓವರ್‌ಹೆಡ್ ಟ್ಯಾಂಕ್ ಸೊರುತ್ತಿದೆ. ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಮೂಳೂರು ದೂರಿದರು. ಮಲ್ಲಾರಿನಲ್ಲಿ ನಲ್ಲಿ ನೀರಿನ ಸಂಪರ್ಕ ಇಲ್ಲದ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಸದಸ್ಯ ಇಮ್ರಾನ್ ಮನವಿ ಮಾಡಿದರು.
ಗತ ಸಭೆಯ ಪ್ರಸ್ತಾವನೆಗಳನ್ನು ಕಾರ್ಯಸೂಚಿಯಲ್ಲಿ ಸರಿಯಾಗಿ ದೃಢೀಕರಿಸಬೇಕು, ವಿರೋಧಪಕ್ಷದವರನ್ನು ಕಡೆಗಣಿಸುವುದು ಸಮಂಜಸವಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಯನ್ನು ನಡೆಸಬೇಕು. ವಿರೋಧಪಕ್ಷದವರ ಮೌನ ದೌರ್ಭಾಗ್ಯವೆಂದು ಭಾವಿಸದಿರಿ ಎಂದು ವಿರೋಧ ಪಕ್ಷದ ಮುಖಂಡ ಅರುಣ್ ಶೆಟ್ಟಿ ಪಾದೂರು ತಾಕೀತು ಮಾಡಿದರು. ಇದಕ್ಕೆ ಉತ್ತರಿಸಿದ ಪುರಸಭಾಧ್ಯಕ್ಷೆ ಸೌಮ್ಯ, ಅನುದಾನದಲ್ಲಿ ತಾರತಮ್ಯ ಮಾಡಿಲ್ಲ. ಎಂಜಿನಿಯರ್‌ಗಳು ಎಲ್ಲಾ ವಾರ್ಡ್‌ಗಳಲ್ಲಿ ಸದಸ್ಯರ ಗಮನಕ್ಕೆ ತಂದು ಕಾಮಗಾರಿಗಳನ್ನು ಗುರುತಿಸಿದ್ದಾರೆ ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ದಾರಿದೀಪ, ಬೋರ್‌ವೆಲ್ ಹಾಗೂ ಬಾವಿಗಳ ನೀರು ಸರಬರಾಜಿಗೆ ಸುಮಾರು ರು.7ಲಕ್ಷ ವಿದ್ಯುತ್ ಬಿಲ್ ಬರುತ್ತಿದೆ. ವಿದ್ಯುತ್ ಬಿಲ್ ಪಾವತಿಗೆ ಯಾವುದೇ ತೊಂದರೆ ಇಲ್ಲ. ಕಾಪು ಪೇಟೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸೂಕ್ತ ಕ್ರಮಕೈಗೊಳ್ಳಲಾಗುವುದು. ಮಳೆಗಾಲಕ್ಕೆ ಮುಂಚಿತವಾಗಿ ಚರಂಡಿ ಹಾಗೂ ತೋಡುಗಳ ಹೂಳೆತ್ತಲಾಗುವುದು ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದರು. ಪುರಸಭೆಯ ಸ್ವಚ್ಛತೆಯನ್ನು ಗುರುತಿಸಿದ ಮಾರಿಗುಡಿಯವರು ತ್ಯಾಜ್ಯ ಸಂಗ್ರಹಕ್ಕೆ ಡ್ರಮ್‌ಗಳನ್ನು ನೀಡಿದ್ದಾರೆ. ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅದನ್ನು ಉಪಯೋಗಿಸಲು ನೀಡಲಾಗುವುದು.
ಕಾಪುವಿಗೆ ಮಿನಿ ವಿಧಾನಸೌಧ: ತಾಲ್ಲೂಕು ಘೋಷಣೆಯಾಗಿರುವುದರಿಂದ ಕಾಪು ಬಂಗ್ಲೆ ಪ್ರದೇಶದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲಾಗುವುದು. ಪುರಸಭಾ ವ್ಯಾಪ್ತಿಯಲ್ಲಿಯೇ ತಾಲ್ಲೂಕು ಕೇಂದ್ರವಿರುವುದರಿಂದ ಪ್ರಮುಖ ರಸ್ತೆಗಳನ್ನು ವಿಸ್ತರಿಸಲು ಯೋಜನೆ ಹಾಕಿಕೊಳ್ಳಲಾಗುವುದು. 33 ಇಲಾಖೆಗಳು, ನ್ಯಾಯಾಲಯ, ತಾಲ್ಲೂಕು ಪಂಚಾಯ್ತಿ ಕಚೇರಿ ಹಾಗೂ ನೂರು ಹಾಸಿಗೆಗಳ ಆಸ್ಪತ್ರೆ ತಾಲೂಕು ವ್ಯಾಪ್ತಿಯಲ್ಲಾಗಲಿದೆ ಎಂದು ಸೊರಕೆ ಹೇಳಿದರು.
ಕಾಪು ತಾಲ್ಲೂಕು ಘೋಷಣೆ ಇತಿಹಾಸದ ಕನಸಲ್ಲೂ ನೆನೆಯಬೇಕಾದ ಕ್ಷಣ. ಕಾಪು ತಾಲೂಕು ರಚನೆ ವಿಷಯದಲ್ಲಿ ನಮಗೇ ಸವಾಲು ಹಾಕಿದ್ದಾರೆ. ತಾಲೂಕು ಘೋಷಿಸಿದ ಮುಖ್ಯಮಂತ್ರಿಯವರನ್ನು ಕರೆಯಿಸಿ ಅಭಿನಂದನೆ ಮಾಡಲಾಗುವುದು. ಇದಕ್ಕೆ ಎಲ್ಲರನ್ನು ಆಹ್ವಾನಿಸಲಾಗುವುದು. ಏಪ್ರಿಲ್ 22 ರಂದು ಮುಖ್ಯಮಂತ್ರಿಯವರನ್ನು ಕಾಪುವಿಗೆ ಕರೆಯಿಸಿ ತಾಲೂಕು ಘೋಷಣೆ ಮಾಡುವಂತೆ ಮನವಿ ಮಾಡಲಾಗಿದೆ. ಆದರೆ ಅವರ ಕಾರ್ಯಕ್ರಮ ಇನ್ನೂ ನಿಗಧಿಯಾಗಿಲ್ಲ. ಮುಖ್ಯಮಂತ್ರಿ ಆಗಮಿಸಿದಲ್ಲಿ ಅದೇ ದಿನ ಮೂರು ಸಾವಿರ ಜನರಿಗೆ ಹಕ್ಕುಪತ್ರ ನೀಡಲಾಗುವುದು ಹಾಗೂ ಸರಕಾರದ ವಿವಿಧ ಸವಲತ್ತುಗಳನ್ನು ವಿತರಿಸಲಾಗುವುದು.
ಪುರಸಭೆ ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್ ಇದ್ದರು.