ಮುಸ್ಲಿಮ್ ನಿಷೇಧ ತಡೆ ಆದೇಶ ವಿಸ್ತರಿಸಿದ ಹವಾಯಿ ನ್ಯಾಯಾಧೀಶ
ಹೊನೊಲುಲು, ಮಾ. 30: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮುಸ್ಲಿಮ್ ನಿಷೇಧ ಆದೇಶಕ್ಕೆ ತಡೆ ನೀಡಿ ತಾನು ಹೊರಡಿಸಿರುವ ಆದೇಶವನ್ನು ವಿಸ್ತರಿಸಲು ಅಮೆರಿಕದ ಹವಾಯಿ ರಾಜ್ಯದ ಫೆಡರಲ್ ನ್ಯಾಯಾಧೀಶ ಡೆರಿಕ್ ವಾಟ್ಸನ್ ನಿರ್ಧರಿಸಿದ್ದಾರೆ.
ವಾದ ಪ್ರತಿವಾದಗಳನ್ನು ಆಲಿಸಿದ ಕೆಲವೇ ಗಂಟೆಗಳಲ್ಲಿ ನಿಷೇಧದ ಕಾಲಾವಧಿಯನ್ನು ಪ್ರಕರಣ ಇತ್ಯರ್ಥಗೊಳ್ಳುವವರೆಗೆ ವಿಸ್ತರಿಸುವ ಆದೇಶವನ್ನು ಅಮೆರಿಕ ಜಿಲ್ಲಾ ನ್ಯಾಯಾಧೀಶರು ಹೊರಡಿಸಿದರು.
ಟ್ರಂಪ್‌ರ ಆದೇಶವು ಮುಸ್ಲಿಮರ ವಿರುದ್ಧ ತಾರತಮ್ಯ ನಡೆಸುತ್ತದೆ ಹಾಗೂ ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ರಾಜ್ಯದ ಆರ್ಥಿಕತೆಗೆ ಹೊಡೆತ ನೀಡುತ್ತದೆ ಎಂದು ಹವಾಯಿ ವಾದಿಸಿದೆ.
ತಡೆಯಾಜ್ಞೆ ವಿಸ್ತರಣೆಯು ಅಮೆರಿಕದಾದ್ಯಂತದ ಮುಸ್ಲಿಮ್ ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಹವಾಯಿ ಹೇಳಿದೆ.
ರಾಷ್ಟ್ರೀಯ ಭದ್ರತೆಯನ್ನು ಖಾತರಿಪಡಿಸುವ ಅಧ್ಯಕ್ಷರ ಅಧಿಕಾರ ವ್ಯಾಪ್ತಿಯಲ್ಲೇ ನಿಷೇಧ ಬರುತ್ತದೆ ಎಂದು ಫೆಡರಲ್ ಸರಕಾರ ಹೇಳಿದೆ.
ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ನಿವಾಸಿಗಳಿಗೆ ಹೊಸ ವೀಸಾಗಳನ್ನು ನಿರಾಕರಿಸುವ ಆದೇಶದ ಭಾಗಕ್ಕೆ ಮಾತ್ರ ನ್ಯಾಯಾಲಯ ತನ್ನ ಆದೇಶವನ್ನು ಸೀಮಿತಗೊಳಿಸಬೇಕು ಎಂದು ಟ್ರಂಪ್ ಆಡಳಿತ ನ್ಯಾಯಾಧೀಶರನ್ನು ಕೋರಿತು.
ಅಮೆರಿಕದ ನಿರಾಶ್ರಿತ ಕಾರ್ಯಕ್ರಮಕ್ಕೆ ವಿಧಿಸಿರುವ ತಡೆಯು ಹವಾಯಿ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಟ್ರಂಪ್ ಆಡಳಿತ ವಾದಿಸಿತು.ಆದರೆ, ನ್ಯಾಯಾಧೀಶರು ಈ ವಾದವನ್ನು ತಿರಸ್ಕರಿಸಿದರು.