ಉಡುಪಿ : ಎ.2 ಮತ್ತು 30ಕ್ಕೆ ಜಿಲ್ಲೆಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ
ಉಡುಪಿ, ಮಾ.30: ಕೇಂದ್ರ ಸರಕಾರದ ನಿರ್ದೇಶನದಂತೆ ಪೋಲಿಯೊ ನಿರ್ಮೂಲನೆಯ ಅಂಗವಾಗಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಉಡುಪಿ ಜಿಲ್ಲೆಯಲ್ಲಿ ಎ.2 ಹಾಗೂ 30ರಂದು ನಡೆಯಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕವೂ ಸೇರಿದಂತೆ ಐದು ರಾಜ್ಯಗಳನ್ನು ಹೊರತು ಪಡಿಸಿ ಉಳಿದೆಡೆಗಳಲ್ಲಿ ಕಳೆದ ಜ.29ರಂದೇ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆದಿತ್ತು. ಇಲ್ಲಿ ಎಂಆರ್ ಲಸಿಕಾ ಆಭಿಯಾನ ನಡೆದ ಕಾರಣ ಇದನ್ನು ಮುಂದೂಡಲಾಗಿತ್ತು ಎಂದರು.
2011ರಿಂದ ಭಾರತದಲ್ಲಿ ಹೊಸ ಪೋಲಿಯೊ ಪ್ರಕರಣ ಕಂಡುಬಂದಿಲ್ಲ. 2014 ಮಾ.3ರಂದು ವಿಶ್ವ ಆರೋಗ್ಯ ಸಂಸ್ಥೆ ಭಾರತಕ್ಕೆ ‘ಪೋಲಿಯೊ ಮುಕ್ತ ರಾಷ್ಟ್ರ’ ಎಂಬ ಪೋಲಿಯೊ ನಿರ್ಮೂಲನೆಯ ಪ್ರಮಾಣ ಪತ್ರವನ್ನು ನೀಡಿದ್ದರೂ, 2015ರ ಕೊನೆಯ ಭಾಗದಲ್ಲಿ ಪಾಕಿಸ್ತಾನ, ಅಘ್ಫಾನಿಸ್ತಾನಗಳಲ್ಲಿ ಪೋಲಿಯೊ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಮುಂದುವರಿಸಲಾಗುತ್ತಿದೆ ಎಂದವರು ವಿವರಿಸಿದರು.
ಕರ್ನಾಟಕದಲ್ಲಿ ಕೊನೆಯ ಪೋಲಿಯೊ ಪ್ರಕರಣ ಪತ್ತೆಯಾಗಿದ್ದು 2007ರ ನ.3ರಂದು. ಅನಂತರ ಇದುವರೆಗೆ ಎಲ್ಲೂ ಪೋಲಿಯೊ ಪ್ರಕರಣ ಪತ್ತೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊನೆಯ ಪೋಲಿಯೊ ಪ್ರಕರಣ 1999ರಲ್ಲಿ ಕಂಡುಬಂದಿದ್ದು, ಅನಂತರ ಕರಾವಳಿಯಲ್ಲಿ ಪ್ರಕರಣ ವರದಿಯಾಗಿಲ್ಲ ಎಂದವರು ನುಡಿದರು.
ಇದೀಗ ಪಲ್ಸ್ ಪೋಲಿಯೊ ಕಾರ್ಯಕ್ರಮದಂಗವಾಗಿ ಎ.2 ಮತ್ತು 30ರಂದು 0ಯಿಂದ 5ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 83,562 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿ ಇದೆ. ಇವುಗಳಲ್ಲಿ 67,919 ಮಕ್ಕಳು ಗ್ರಾಮಾಂತರ ಪ್ರದೇಶದಲ್ಲಿ ಹಾಗೂ 15,643 ಮಂದಿ ನಗರ ಪ್ರದೇಶ ವ್ಯಾಪ್ತಿಯಲ್ಲಿದ್ದಾರೆ.
ಉಡುಪಿ ತಾಲೂಕಿನಲ್ಲಿ 38,287 (27,087 ಗ್ರಾಮಾಂತರ, 11,200 ನಗರ), ಕುಂದಾಪುರ ತಾಲೂಕಿನಲ್ಲಿ 30046(27,270, 2776), ಕಾರ್ಕಳ ತಾಲೂಕಿನಲ್ಲಿ 15229 (13562, 1667) ಮಕ್ಕಳಿಗೆ ಲಸಿಕೆ ನೀಡಬೇಕಾಗಿದೆ.
ಜಿಲ್ಲೆಯಲ್ಲಿ ಒಟ್ಟು 648 (560ಗ್ರಾ., 88ನ.) ಲಸಿಕಾ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ಇವುಗಳಲ್ಲಿ ಉಡುಪಿ ತಾಲೂಕಿನಲ್ಲಿ 253 (198, 55), ಕುಂದಾಪುರ ತಾಲೂಕಿನಲ್ಲಿ 275 (255, 20) ಹಾಗೂ ಕಾರ್ಕಳ ತಾಲೂಕಿನಲ್ಲಿ 120 (107, 13) ಲಸಿಕಾ ಕೇಂದ್ರಗಳಿರುತ್ತವೆ. ಒಟ್ಟು 2592 ಸ್ವಯಂಸೇವಕರು ಜಿಲ್ಲೆಯಲ್ಲಿ -ಉಡುಪಿ-1012, ಕುಂದಾಪುರ-1100, ಕಾರ್ಕಳ-480- ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಒಟ್ಟು 41 ಮೊಬೈಲ್ ಮತ್ತು ಟ್ರಾನ್ಸಿಸ್ಟ್ ಬೂತ್‌ಗಳು- ಉ-21, ಕು-13, ಕಾ-7- ಕಾರ್ಯನಿರ್ವಹಿಸಲಿವೆ. ಇವುಗಳಲ್ಲಿ ಒಟ್ಟು 164 ಮಂದಿ ಸ್ವಯಂಸೇವಕರು ಇರುವರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದು ಬೇಸಿಗೆಯ ಕಾಲವಾಗಿರುವ ಕಾರಣ ಬೆಳಗ್ಗೆ ಬೇಗ ಲಸಿಕೆ ಹಾಕುವುದು ಉತ್ತಮ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ತಿಳಿಸಿದರು. ಎ.2ರಂದು ಲಸಿಕೆ ಹಾಕಿಸಿಕೊಳ್ಳದ ಮಕ್ಕಳಿಗೆ ಗ್ರಾಮೀಣ ಭಾಗದಲ್ಲಿ ಎ.3 ಮತ್ತು 4ರಂದು ಹಾಗೂ ನಗರ ಪ್ರದೇಶಗಳಲ್ಲಿ 3,4,5ರಂದು ಸ್ವಯಂಸೇವಕರು ಮನೆ ಮನೆಗಳಿಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕುವರು ಎಂದವರು ನುಡಿದರು.
ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಎ.2ರಂದು ಬೆಳಗ್ಗೆ 8:00ಗಂಟೆಗೆ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗುವುದು ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.