‘ಅತ್ಯಾಚಾರದಿಂದ ಲೈಂಗಿಕ ತೃಪ್ತಿ ಸಿಕ್ಕಿಲ್ಲ’ ಎಂಬ ಕಾರಣಕ್ಕೆ ಅತ್ಯಾಚಾರಿಯ ಖುಲಾಸೆ
ಮೆಕ್ಸಿಕೊ ಸಿಟಿ, ಮಾ. 30: ಅಪ್ತಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದ ಪ್ರಕರಣದಲ್ಲಿ ಆರೋಪಿಗೆ ಅತ್ಯಾಚಾರದಿಂದ ಲೈಂಗಿಕ ತೃಪ್ತಿ ಸಿಕ್ಕಿಲ್ಲ ಎಂಬ ನೆಲೆಯಲ್ಲಿ ದೋಷಮುಕ್ತಗೊಳಿಸಿದ ಮೆಕ್ಸಿಕೊದ ನ್ಯಾಯಾಧೀಶನೊಬ್ಬನನ್ನು ನ್ಯಾಯಾಂಗ ಮಂಡಳಿಯೊಂದು ಬುಧವಾರ ಅಮಾನತುಗೊಳಿಸಿದೆ.
ನ್ಯಾಯಾಧೀಶರ ಈ ತೀರ್ಪು ಮೆಕ್ಸಿಕನ್ ಜನತೆಯನ್ನು ಕೆರಳಿಸಿತ್ತು. ಶ್ರೀಮಂತರಿಗೆ ಕಾನೂನಿನಿಂದ ವಿನಾಯಿತಿ ನೀಡುವ ಇನ್ನೊಂದು ಪ್ರಕರಣ ಇದಾಗಿದೆ ಎಂಬುದಾಗಿ ಜನರು ಈ ಪ್ರಕರಣವನ್ನು ವ್ಯಾಖ್ಯಾನಿಸಿದ್ದಾರೆ.
2015 ಜನವರಿಯಲ್ಲಿ ಅತ್ಯಾಚಾರ ನಡೆದಾಗ ಸಂತ್ರಸ್ತೆಗೆ 17 ವರ್ಷ ವಯಸ್ಸು. ಆಕೆಯನ್ನು ನಾಲ್ವರು ಯುವಕರು ಕಾರೊಂದರಲ್ಲಿ ಅಪಹರಿಸಿ ಅತ್ಯಾಚಾರಗೈದಿದ್ದರು.
ಮಾರ್ಚ್ 22ರಂದು ತೀರ್ಪು ನೀಡಿದ ನ್ಯಾಯಾಧೀಶ ಆ್ಯನುವರ್ ಗೊನ್ಸಾಲಿಸ್, ಲೈಂಗಿಕ ತೃಷೆಯನ್ನು ತೃಪ್ತಿಪಡಿಸುವ ಉದ್ದೇಶವಿಲ್ಲದೆ ಆಕಸ್ಮಿಕವಾಗಿ ಸ್ಪರ್ಶ ನಡೆದರೆ ಅದನ್ನು ಲೈಂಗಿಕ ಕ್ರಿಯೆ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿ ಆರೋಪಿಗಳ ಪೈಕಿ ಓರ್ವನನ್ನು ದೋಷಮುಕ್ತಗೊಳಿಸಿದ್ದರು.
ಅದೂ ಅಲ್ಲದೆ, ‘‘ಸಂತ್ರಸ್ತೆ ಅಸಹಾಯಕಿಯೇನೂ ಆಗಿರಲಿಲ್ಲ, ಆಕೆ ಆರೋಪಿಯಿಂದ ದೂರ ಹೋಗಬಹುದಾಗಿತ್ತು’’ ಎಂದೂ ನ್ಯಾಯಾಧೀಶರು ಹೇಳಿದ್ದರು.
ಬುಧವಾರ ಹೇಳಿಕೆಯೊಂದನ್ನು ನೀಡಿದ ಮೆಕ್ಸಿಕೊದ ಫೆಡರಲ್ ನ್ಯಾಯಾಂಗ ಆಯೋಗ, ಗೊನ್ಸಾಲಿಸ್‌ರನ್ನು ಅಮಾನತಿನಲ್ಲಿಡಲಾಗಿದೆ ಹಾಗೂ ಜಿಲ್ಲಾ ನ್ಯಾಯಾಧೀಶರಾಗಿ ಅವರ ವರ್ತನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಹೇಳಿತು.