×
Ad

ಕಾನೂನುಬದ್ಧ ಕಸಾಯಿಖಾನೆಗಳ ವಿರುದ್ದ ಕ್ರಮ ಇಲ್ಲ : ಆದಿತ್ಯನಾಥ್ ಭರವಸೆ

Update: 2017-03-30 22:03 IST

ಲಕ್ನೊ, ಮಾ.30: ರಾಜ್ಯದಲ್ಲಿ ಪರವಾನಿಗೆ ಪಡೆದು ಕಾರ್ಯಾಚರಿಸುತ್ತಿರುವ ಕಸಾಯಿಖಾನೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಭರವಸೆ ನೀಡಿದ್ದು, ಇದರೊಂದಿಗೆ ಉತ್ತರಪ್ರದೇಶದಲ್ಲಿ ಮುಷ್ಕರ ಮಾಂಸ ವ್ಯಾಪಾರಿಗಳು ನಡೆಸುತ್ತಿರುವ ಮುಷ್ಕರ ಶೀಘ್ರ ಅಂತ್ಯಗೊಳ್ಳುವ ನಿರೀಕ್ಷೆಯಿದೆ.

ಮುಖ್ಯಮಂತ್ರಿ ಜತೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಸಕ್ರಮವಾಗಿ ಕಾರ್ಯಾಚರಿಸುತ್ತಿರುವ ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ . ನಿಮ್ಮ ಕಾರ್ಯ ಮುಂದುವರಿಸಿ ಸರಕಾರ ನಿಮ್ಮ ಬೆಂಬಲಕ್ಕಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿರುವುದಾಗಿ ಮಾಂಸ ರಫ್ತುದಾರ ಸಿರಾಜುದ್ದೀನ್ ಖುರೇಶಿ ತಿಳಿಸಿದ್ದಾರೆ.

ಸರಕಾರ ರಾಜ್ಯಾದ್ಯಂತ ಕಸಾಯಿಖಾನೆಗಳ ವಿರುದ್ದ ಕಾರ್ಯಾಚರಣೆ ಕೈಗೊಂಡಿರುವುದನ್ನು ವಿರೋಧಿಸಿ ಸೋಮವಾರದಿಂದ ರಾಜ್ಯದ ಕಸಾಯಿಖಾನೆ ಮಾಲಿಕರು, ಮಾಂಸ ವ್ಯಾಪಾರಿಗಳು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಮಾಂಸ ವ್ಯಾಪಾರಿಗಳ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತ್ತು.

ಹಾಸ್ಟೆಲ್‌ನಲ್ಲಿ ಸಪ್ಪೆ ಆಹಾರ- ದೂರು: ಈ ಮಧ್ಯೆ ಮಾಂಸ ವ್ಯಾಪಾರಿಗಳ ಮುಷ್ಕರದ ಹಿನ್ನೆಲೆಯಲ್ಲಿ ಮಾಂಸಕ್ಕೆ ತೀವ್ರ ಕೊರತೆಯಾಗಿರುವ ಕಾರಣ ಹಾಸ್ಟೆಲ್‌ನಲ್ಲಿ ಸಪ್ಪೆ ಆಹಾರ ಪೂರೈಸಲಾಗುತ್ತಿದೆ ಎಂದು ಆಲಿಗಢ ಮುಸ್ಲಿಂ ಯೂನಿವರ್ಸಿಟಿ(ಎಎಂಯು) ವಿದ್ಯಾರ್ಥಿಗಳು ದೂರು ನೀಡಿದ್ದಾರೆ.

ರಾಜ್ಯದಲ್ಲಿ ಮಾಂಸ ವ್ಯಾಪಾರಿಗಳ ಮುಷ್ಕರದಿಂದಾಗಿ ಮಾಂಸಕ್ಕೆ ಕೊರತೆಯಾಗಿದ್ದು ಕೋಳಿ ಮಾಂಸದ ಬೆಲೆ ವಿಪರೀತ ಏರಿಕೆಯಾಗಿದೆ . ಹಾಸ್ಟೆಲ್‌ನ 20000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇದೀಗ ತರಕಾರಿ ಊಟ ಪೂರೈಸಲಾಗುತ್ತಿದ್ದು ಇದು ಸಪ್ಪೆಯಾಗಿದೆ.

ಆದ್ದರಿಂದ ಹಾಸ್ಟೆಲ್‌ನಲ್ಲಿ ಕೇಂದ್ರೀಕೃತ ಖರೀದಿ ವ್ಯವಸ್ಥೆಯ ಮೂಲಕ ಒಬ್ಬನೇ ನೋಂದಾಯಿತ ಮಾಂಸ ಪೂರೈಕೆದಾರರಿಂದ ಮಾಂಸ ಖರೀದಿಸುವ ವ್ಯವಸ್ಥೆಯಾಗಬೇಕು ಎಂದು ಎಎಂಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಫೈಝಲ್ ಹಸನ್, ಎಎಂಯು ವಿವಿಯ ಉಪಕುಲಪತಿ ಲೆ.ಜ.(ನಿವೃತ್ತ) ಝಮೀರುದ್ದೀನ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ಸಭೆಯೊಂದನ್ನು ಕರೆಯಲಾಗಿದೆ ಎಂದು ವಿವಿಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News