ಕಲ್ಲಡ್ಕ : ಕರು ಸಾಗಾಟ ಮಾಡುತ್ತಿದ್ದ ಆಟೋ ಅಡ್ಡಗಟ್ಟಿ ಚಾಲಕ, ವೃದ್ಧನಿಗೆ ಸಂಘಪರಿವಾರ ಕಾರ್ಯಕರ್ತರಿಂದ ಹಲ್ಲೆ
ಬಂಟ್ವಾಳ, ಮಾ. 30: ಕರು ಸಾಗಾಟ ಮಾಡುತ್ತಿದ್ದ ಆಟೋ ರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಿದ್ದ ಸಂಘಪರಿವಾರದ ಕಾರ್ಯಕರ್ತರು ರಿಕ್ಷಾ ಚಾಲಕ ಮತ್ತು ಹಿಂಬದಿಯಿದ್ದ ವೃದ್ಧರೊಬ್ಬರಿಗೆ ಹಲ್ಲೆ ನಡೆಸಿರುವ ಘಟನೆ ಗುರುವಾರ ರಾತ್ರಿ 9:30ರ ಸುಮಾರಿಗೆ ಕಲ್ಲಡ್ಕದಲ್ಲಿ ನಡೆದಿದೆ.
ಹಲ್ಲೆಗೊಳಗಾದವರ ಹೆಸರು, ವಿಳಾಸ ತಿಳಿದು ಬಂದಿಲ್ಲ. ಅಡ್ಯಾರ್ ಕಣ್ಣೂರಿನಿಂದ ಮಾಣಿಗೆ ಕರುವೊಂದನ್ನು ಸಾಗಾಟ ಮಾಡುತ್ತಿದ್ದ ಆಟೊ ರಿಕ್ಷಾವನ್ನು ಕಲ್ಲಡ್ಕದಲ್ಲಿ ಅಡ್ಡಗಟ್ಟಿರುವ ಸಂಘಪರಿವಾರದ ಕಾರ್ಯಕರ್ತರ ತಂಡ ರಿಕ್ಷಾ ಚಾಲಕ ಮತ್ತು ರಿಕ್ಷಾದ ಹಿಂಬದಿಯಿದ್ದ ವೃದ್ಧರೊಬ್ಬರಿಗೆ ಹಲ್ಲೆ ನಡೆಸಿದೆ. ತಕ್ಷಣ ಸ್ಥಳದಲ್ಲಿ ಬಂದೋಬಸ್ತ್‌ನಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಿ ರಿಕ್ಷಾ ಚಾಲಕ ಮತ್ತು ವೃದ್ಧರನ್ನು ವಶಕ್ಕೆ ಪಡೆದು ಬಂಟ್ವಾಳ ನಗರ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದು ಕಲ್ಲಡ್ಕ ಪರಿಸರದಲ್ಲಿ ಮತ್ತು ಬಂಟ್ವಾಳ ನಗರ ಠಾಣೆಯ ಮುಂಭಾಗ ಎರಡೂ ಕೋಮಿನ ಯುವಕರು ಜಮಾಯಿಸತೊಡಗಿದರು. ಇದರಿಂದ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಯಿತು. ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್. ಮತ್ತು ನಗರ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ನೇತೃತ್ವದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.