ಇರುವೈಲು : ಸ್ಪೋಟಕ ಸಿಡಿದು ಓರ್ವ ಸಾವು, ಇನ್ನೋರ್ವ ಗಂಭೀರ

Update: 2017-03-30 17:51 GMT
ಘಟನೆ ನಡೆದ ಸ್ಥಳ

ಮೂಡುಬಿದಿರೆ,ಮಾ.30 : ಇರುವೈಲಿನ ಕಲ್ಲಿನ ಕೋರೆಯೊಂದರಲ್ಲಿ ಸ್ಪೋಟಕ ಸಿಡಿದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ಶಿವಮೊಗ್ಗ ಸೊರಬ ತಾಲೂಕಿನ ಬಾಣಾಮತಿ ಎಂಬಲ್ಲಿನ ನಿವಾಸಿ ಉಮೇಶ್ (32) ಎಂಬಾತನೇ ಸಾವಿಗೀಡಾದ ವ್ಯಕ್ತಿ. ಇಲ್ಲಿನ ಕಲ್ಲುಗಣಿಯಲ್ಲಿ ಕೆಲಸ ನಿರ್ವಹಿಸುವ ಸಂದರ್ಭ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಇನ್ನಿಬ್ಬರು ಕಾರ್ಮಿಕರು ಗಾಯಗೊಂಡಿದ್ದು, ಗಂಭೀರ ಗಾಯಗೊಂಡ ಒಬ್ಬನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ರಿಸ್ಟಲ್ ಅಸೋಸಿಯೇಟ್ಸ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಈ ಕೋರೆಯಲ್ಲಿ ಡ್ರಿಲ್ಲಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಿಂಬದಿಯಲ್ಲಿದ್ದ ಸ್ಪೋಟಕ ಸಿಡಿದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಇನ್ನೊಂದು ಮೂಲದ ಪ್ರಕಾರ ಕಲ್ಲು ಸ್ಪೋಟಕ್ಕೆಂದು ಬಂಡೆಗೆ ತೂತು ಕೊರೆದು ಸ್ಪೋಟಕ ಇಟ್ಟಿದ್ದು ಅದು ಸ್ಪೋಟಗೊಳ್ಳದೇ ಇದ್ದಾಗ ಏನಾಯಿತೆಂದು ಹತ್ತಿರ ಹೋಗಿ ನೋಡುತ್ತಿದ್ದಂತೆ ಸ್ಪೋಟ ಸಂಭವಿಸಿದೆ. ಘಟನೆಯ ಸಂದರ್ಭ ಉಮೇಶ್ ದೇಹ ಛಿದ್ರಗೊಂಡಿದ್ದು, ಉಳಿದವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇರುವೈಲು ಪ್ರದೇಶದಲ್ಲಿ ಮೂರು ಕಲ್ಲಿನ ಕೋರೆಗಳು ಕಾರ್ಯಾಚರಿಸುತ್ತಿದ್ದು, ಈ ಕ್ರಷರ್‌ನಿಂದ ಸ್ಥಳಿಯ ಜಲವಿದ್ಯುತ್ ಯೋಜನೆಯಾದ ಸೋಹಮ್ ಲಿಮಿಟೆಡ್ ಸಂಸ್ಥೆಗೆ ಜಲ್ಲಿ ಕಲ್ಲು ಪೂರೈಕೆಯಾಗುತ್ತಿದೆ. ಕ್ರಿಸ್ಟಲ್ ಸಂಸ್ಥೆಯು ಜಲ್ಲಿ ಉತ್ಪಾದನೆಯ ಜೊತೆಗೆ ಸೋಹಂ ಕಾರ್ಯಾಚರಣೆಯಲ್ಲಿ ಗುತ್ತಿಗೆಯನ್ನೂ ನಿರ್ವಹಿಸುತ್ತಿದೆ.

ಎಸಿಪಿ ರಾಜೇಂದ್ರ, ಮೂಡುಬಿದಿರೆ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News