ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ: ಐವರ ಬಂಧನ

Update: 2017-03-30 17:35 GMT

ಪುತ್ತೂರು,ಮಾ.30 : ಪುತ್ತೂರು ನಗರದ ಹೊರವಲಯದ ನೆಹರೂನಗರದ ಬಳಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಸಂಜೆ ವಿದ್ಯಾರ್ಥಿ ಗುಂಪುಗಳೆರಡರ ನಡುವೆ ನಡೆದಿದ್ದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು 5 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿ ವಿದ್ಯಾರ್ಥಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

 ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸ್ಥಳೀಯರನ್ನೊಳಗೊಂಡ ವಿದ್ಯಾರ್ಥಿ ಗುಂಪೊಂದರ ಹಾಗೂ ಪಿಜಿ ಯಲ್ಲಿದ್ದುಕೊಂಡು ಇದೇ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಗುಂಪೊಂದರ ನಡುವೆ ಹೊಡೆದಾಟ ನಡೆದಿದ್ದು, ಪಿಜಿಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜಿನ ದ್ವಿತೀಯ ಬಿಬಿಎಂ ವಿದ್ಯಾರ್ಥಿ ವಿನುತ್‌ರಾಜ್ (19) ,ಅದೇ ತರಗತಿಯ ವಿದ್ಯಾರ್ಥಿಯಾದ ಮಡಿಕೇರಿಯ ರಾಜೇಶ್ (19) ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ತಮ್ಮ ಮೇಲೆ ವಿದ್ಯಾರ್ಥಿ ತಂಡವೊಂದು ಕೊಲೆ ನಡೆಸುವ ಉದ್ದೇಶದಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು.

  ಇದೇ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿಯಾದ ಕೊಡಿಪ್ಪಾಡಿಯ ನಿವಾಸಿ ಕಾರ್ತಿಕ್ (19) ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿ ಜಿತೇಂದ್ರ(19)ಎಂಬವರು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮ ಮೇಲೆ ವಿದ್ಯಾರ್ಥಿ ತಂಡ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದರು.  ಘಟನೆಗೆ ಸಂಬಂಧಿಸಿ ಇತ್ತಂಡದ ವಿದ್ಯಾರ್ಥಿಗಳು ಪೊಲೀಸರಿಗೆ ದೂರು ನೀಡಿದ್ದರು. ಹಲ್ಲೆಗೊಳಗಾಗಿದ್ದ ವಿನುತ್‌ರಾಜ್ ಮತ್ತು ರಾಜೇಶ್ ಗುಂಪಿನವರು ಅಕ್ಷಯ್, ನಿಶಾಂತ್,ಅಭಿಷೇಕ್, ಕಾರ್ತಿಕ್, ನಿತನ್ ಮತ್ತಿತರರ ಸೇರಿಕೊಂಡು ತಮ್ಮ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದಾಗಿ ದೂರು ನೀಡಿದ್ದರು. ಕಾರ್ತಿಕ್ ಗುಂಪಿನವರು ಪಿಜಿ ವಿದ್ಯಾರ್ಥಿಗಳಾದ ವಿನುತ್‌ರಾಜ್, ಯತೀಂದ್ರ,ತೌಸಿಫ್,ರಾಜೇಶ್,ಶಶಿಕಾಂತ್,ಭಗತ್,ಧನುಷ್,ಗುರುದರ್ಶನ್ ಎಂಬವರು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದರು.

 ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ತಿಳಿದುಕೊಂಡು ಇದೀಗ ಒಂದು ಗುಂಪಿನ ವಿದ್ಯಾರ್ಥಿಗಳ ಮೇಲೆ 307 ಸೆಕ್ಷನ್‌ನಡಿ ಪ್ರಕರಣ ದಾಖಲಿಸಿಕೊಂಡು ಅಕ್ಷಯ್, ನಿಶಾಂತ್,ಅಭಿಷೇಕ್, ಕಾರ್ತಿಕ್, ನಿತನ್ ಎಂಬವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News