ಎ.1ರಂದು ಕಾರಂತರ ಯಕ್ಷ ಬ್ಯಾಲೆ ‘ನಳ-ದಮಯಂತಿ’

Update: 2017-03-30 17:55 GMT

ಉಡುಪಿ, ಮಾ.30: ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಕೋಟ ಶಿವರಾಮ ಕಾರಂತ ಅವರು ಕರಾವಳಿಯ ಗಂಡುಕಲೆ ಯಕ್ಷಗಾನವನ್ನು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ತಲುಪಿಸಲು ರೂಪಿಸಿದ ಯಕ್ಷಗಾನ ಬ್ಯಾಲೆಯ ‘ನಳ ದಮಯಂತಿ’ ಪ್ರಸಂಗದ ಪ್ರದರ್ಶನ ಎ.1ರಂದು ಅಂಬಲಪಾಡಿಯಲ್ಲಿ ನಡೆಯಲಿದೆ ಎಂದು ಬ್ಯಾಲೆಯ ಮರು ನಿರ್ದೇಶನ ಮಾಡಿದ ವಿದ್ವಾನ್ ಸುಧೀರ್‌ರಾಜ್ ಕೊಡವೂರು ತಿಳಿಸಿದ್ದಾರೆ.

ಉಡುಪಿಯಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲಿಗ್ರಾಮದ ಡಾ.ಕೆ.ಶಿವರಾಮ ಕಾರಂತ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿ ತಂಡ ಈ ಬ್ಯಾಲೆಯನ್ನು ಪ್ರದರ್ಶಿಸಲಿದೆ ಎಂದವರು ಹೇಳಿದರು.

ಡಾ.ಕಾರಂತ ಅವರು ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನಕ್ಕಾಗಿ ಒಟ್ಟು ಎಂಟು ಪ್ರದರ್ಶನಗಳನ್ನು ಯಕ್ಷಗಾನ ಬ್ಯಾಲೆಯಾಗಿ ರೂಪಿಸಿ ಪ್ರದರ್ಶಿಸಿದ್ದು, ಅವುಗಳಲ್ಲಿ ಎರಡನ್ನು -ಪಂಚವಟಿ ಹಾಗೂ ಅಭಿಮನ್ಯು ವಧೆ- ಕರ್ನಾಟಕ ಕಲಾದರ್ಶಿನಿ ತಂಡ ಈಗಾಗಲೇ ದೇಶಾದ್ಯಂತ ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದೆ ಎಂದು ಕೊಡವೂರು ತಿಳಿಸಿದರು.

ಯಕ್ಷಗಾನದಲ್ಲಿ ಪ್ರಮುಖ ಅಂಗವಾಗಿರುವ ಮಾತುಗಾರಿಕೆಯನ್ನು ಮೊಟಕುಗೊಳಿಸಿ, ಕೇವಲ ಭಾಗವತಿಕೆ ಹಾಗೂ ಅಭಿನಯದ ಮೂಲಕ ಕತೆಯನ್ನು ಪ್ರೇಕ್ಷಕರಿಗೆ ಮುಟ್ಟಿಸಲು ಬ್ಯಾಲೆಯನ್ನು ಬಳಸಿಕೊಂಡು ಯಶಸ್ಸು ಸಾಧಿಸಿದ್ದರು. ಕಾರಂತರು ರೂಪಿಸಿದ ಬ್ಯಾಲೆಯ ಎಲ್ಲಾ ಅಂಶಗಳನ್ನು ಉಳಿಸಿಕೊಂಡು ಅದನ್ನು ಮರು ಪ್ರದರ್ಶನಕ್ಕೊಳಪಡಿಸಲಾಗಿದೆ.

ಪ್ರದರ್ಶನದಲ್ಲಿ 10 ಮಂದಿ ಕಲಾವಿದರು ಹಾಗೂ ಆರು ಮಂದಿ ಹಿಮ್ಮೇಳ ದವರನ್ನು ಬಳಸಿಕೊಳ್ಳಲಾಗಿದೆ. ಮುಂದೆ ಕಾರಂತರ ಉಳಿದ ಬ್ಯಾಲೆಗಳನ್ನು -ಬಬ್ರುವಾಹನ, ಬೀಷ್ಮ ವಿಜಯ ಇತ್ಯಾದಿ- ಪ್ರದರ್ಶಿಸುವ ಯೋಜನೆ ರೂಪಿಸಲಾಗಿದೆ ಎಂದು ಕಲಾದರ್ಶಿನಿಯ ಶ್ರೀನಿವಾಸ ಸಾಸ್ತಾನ ತಿಳಿಸಿದರು.

 ‘ನಳ ದಮಯಂತಿ’ ಬ್ಯಾಲೆಯ ಮೊದಲ ಪ್ರದರ್ಶನ ಎ.1ರಂದು ಸಂಜೆ 6:00ಗಂಟೆಗೆ ಅಂಬಲಪಾಡಿ ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ದೇವಳದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಪ್ರೊ.ಉದ್ಯಾವರ ಮಾಧವ ಆಚಾರ್ಯ ಹಾಗೂ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಮುಖ್ಯ ಅತಿಥಿಗಳಾಗಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕಲಾದರ್ಶಿನಿಯ ಅಧ್ಯಕ್ಷೆ ಶಾರದಾ ಹಾಗೂ ಡಾ.ರಾಧಾಕೃಷ್ಣ ಉರಾಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News