×
Ad

ಬ್ರೋಕರ್‌ಗಳ ಮೇಲೆ ಸಿಸಿಟಿವಿ ಕ್ಯಾಮರಾ ಕಣ್ಗಾವಲು: ತಹಶೀಲ್ದಾರ್

Update: 2017-03-31 15:24 IST

ಮಂಗಳೂರು, ಮಾ.31: ಸ್ಥಳೀಯ ತಾಲೂಕು ಕಚೇರಿಯಲ್ಲಿ ಬ್ರೋಕರ್‌ಗಳ ಹಾವಳಿಯನ್ನು ತಪ್ಪಿಸಲು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಮಂಗಳೂರು ತಾಲೂಕು ತಹಶೀಲ್ದಾರ್ ಮಹದೇವಯ್ಯ ತಿಳಿಸಿದ್ದಾರೆ. ನಗರದ ಮಿನಿ ವಿಧಾನ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ಇಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕುಂದು ಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಸಭೆಯಲ್ಲಿ ದಲಿತ ನಾಯಕ ಜಗದೀಶ್ ಪಾಂಡೇಶ್ವರ್, ಕಚೇರಿಯಲ್ಲಿ ಬ್ರೋಕರ್‌ಗಳಿಂದಾಗಿ ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿರುವ ಬಗ್ಗೆ ಅಹವಾಲು ಸಲ್ಲಿಸಿದ್ದರು. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ದಲ್ಲಾಳಿಗಳ ಹಾವಳಿ ತಪ್ಪಿಸಲು ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಕೂಡಾ ಇದಕ್ಕೆ ಬೆಲೆ ನೀಡಿದ್ದಾರೆ. ಬಹುತೇಕವಾಗಿ ಈ ಹಾವಳಿ ತಪ್ಪಿದ್ದು, ಈಗ ಸಿಸಿಟಿವಿ ಕ್ಯಾಮರಾ ಇರುವುದರಿಂದ ಅಂತಹ ಯಾವುದೇ ಪ್ರಮೇಯ ಎದುರಾದಲ್ಲಿ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ವೀಕ್ಷಿಸಿ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು. ಸರಕಾರದ ಸೌಲಭ್ಯಗಳು ನೇರವಾಗಿ ಜನರಿಗೆ ತಲುಪಿಸುವುದು ನಮ್ಮ ಕರ್ತವ್ಯ. ಆ ನೆಲೆಯಲ್ಲಿ ತಾಲೂಕು ಕಚೇರಿ ಕಾರ್ಯಪ್ರವೃತ್ತವಾಗಿದೆ ಎಂದವರು ಹೇಳಿದರು. ಇತ್ತೀಚೆಗೆ ವ್ಯಕ್ತಿಯೊಬ್ಬರ ಖಾತೆ ಬದಲಾವಣೆಗೆ ಸಂಬಂಧಿಸಿ ದಲ್ಲಾಳಿಯೊಬ್ಬರು ಸಾವಿರಾರು ರೂ. ಪಡೆದು ವಂಚಿಸಿರುವುದಾಗಿ ಕಚೇರಿಯಲ್ಲಿ ಅಳಲು ತೋಡಿಕೊಂಡಿದ್ದರು. ಆ ಬಗ್ಗೆ ಪೊಲೀಸರಿಗೆ ದೂರು ನೀಡಿ ಹಣ ವಸೂಲು ಮಾಡಿದ್ದ ವ್ಯಕ್ತಿಯಿಂದ ವಂಚನೆಗೆ ಸಿಲುಕಿದ್ದವರಿಗೆ ಅದನ್ನು ವಾಪಸ್ ಕೊಡಿಸಲಾಗಿದೆ. ಸಾರ್ವಜನಿಕರು ಕೂಡಾ ನೇರವಾಗಿ ಕಚೇರಿಯಲ್ಲಿ ಸವಲತ್ತುಗಳು, ಅರ್ಜಿ ಸಲ್ಲಿಕೆ ಕೆಲಸವನ್ನು ಯಾವುದೇ ಅಡಚಣೆಯಲ್ಲದೆ ಮಾಡಬಹುದು ಎಂದು ತಹಶೀಲ್ದಾರ್ ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಕಳೆದ ಸಭೆಯಲ್ಲಿ ಬಂದ ದೂರುಗಳಿಗೆ ಸಂಬಂಧಿಸಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಹಾಗೂ ಅಹವಾಲುಗಳನ್ನು ಸ್ವೀಕರಿಸಲಾಯಿತು. ಸಭೆಯಲ್ಲಿ ಎಸಿಪಿ ಉದಯ ನಾಯಕ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News