×
Ad

​ಎ.2ರಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ

Update: 2017-03-31 18:39 IST

ಮಂಗಳೂರು, ಮಾ.31: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೊದಲ ಹಂತದ ಲಸಿಕೆ ಕಾರ್ಯಕ್ರಮ ಜಿಲ್ಲ್ಲಾದ್ಯಂತ ಎ.2ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 9ಕ್ಕೆ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಗ್ರಾಮಾಂತರದ 1,14,540 ಹಾಗೂ ನಗರದ 50,425 ಸಹಿತ 1,64,965 ಮಂದಿ 0-5 ವರ್ಷದ ಮಕ್ಕಳಿದ್ದು, ಅವರಿಗೆ 921 ಬೂತ್‌ಗಳ ಮೂಲಕ ಲಸಿಕೆ ಹಾಕುವ ಕಾರ್ಯಕ್ರಮ ಏಕಕಾಲದಲ್ಲಿ ನಡೆಯಲಿದೆ. ಜನಸಂದಣಿ ಇರುವ ಜಾಗದಲ್ಲಿ ಲಸಿಕೆ ಹಾಕಲು 27 ಟ್ರಾನ್ಸಿಟ್ ತಂಡ ಹಾಗೂ 9 ಸಂಚಾರಿ ತಂಡವನ್ನು ರಚಿಸಲಾಗಿದೆ ಎಂದು ಡಾ.ರಾಮಕೃಷ್ಣರಾವ ಹೇಳಿದರು.

ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆಸ್ಪತ್ರೆಗಳು ಮುಂತಾದೆಡೆಗಳಲ್ಲಿ ಲಸಿಕೆ ಕೇಂದ್ರಗಳು ಇರಲಿದೆ. ಎಲ್ಲ ಪೋಷಕರು ತಮ್ಮ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸಿಕೊಳ್ಳಬೇಕು. ಬಾಕಿಯಾದ ಮಕ್ಕಳನ್ನು ಗುರುತಿಸಿ ಮುಂದಿನ ಮೂರು ದಿನಗಳ ಕಾಲ ಮನೆಗಳಿಗೆ ತೆರಳಿ ಲಸಿಕೆ ಹಾಕಿಸುವ ಕಾರ್ಯಕ್ರಮ ನಿಗದಿಪಡಿಸಲಾಗಿದೆ ಎಂದರು.

ಭಾರತವು ಪೋಲಿಯೋ ಕಾಯಿಲೆಯಿಂದ ಮುಕ್ತವಾದರೂ ನೆರೆಯ ಕೆಲವು ರಾಷ್ಟ್ರಗಳಲ್ಲಿ ಇನ್ನೂ ಈ ಕಾಯಿಲೆ ಇದೆ. ಹಾಗಾಗಿ ಪೋಲಿಯೋ ಲಸಿಕೆ ಕಾರ್ಯಕ್ರಮ ಮುಂದುವರಿಸಲಾಗಿದ್ದು, ಎಲ್ಲ ಪೋಷಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆರ್‌ಸಿಎಚ್ ಅಧಿಕಾರಿ ಡಾ.ಅಶೋಕ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News