ಎ.1ರಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯ
ಮಂಗಳೂರು, ಮಾ.31: ಅಂತಾರಾಷ್ಟ್ರೀಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಎ.1ರಿಂದ ಇ-ವೀಸಾ ಸೌಲಭ್ಯ ಸಿಗಲಿದ್ದು, ಇದು ಕರಾವಳಿಯ ಪ್ರವಾಸೋದ್ಯಮಕ್ಕೆ ನಾಂದಿ ಹಾಡಲಿದೆ.
ಏನಿದು ಇ-ವೀಸಾ:
ಸಾಮಾನ್ಯವಾಗಿ ಪ್ರವಾಸ ಮಾಡುವವರು ಅರ್ಜಿಯ ಜೊತೆಗೆ ಮೂಲ ಪಾಸ್‌ಪೋರ್ಟ್ ಸಲ್ಲಿಸಬೇಕು. ಅದಕ್ಕೆ ಅನುಮೋದನೆ ಸಿಕ್ಕಿದ ಬಳಿಕ ಪಾಸ್‌ಪೋರ್ಟ್‌ನಲ್ಲಿ ಮುದ್ರೆ ಹಾಕಲಾಗುತ್ತದೆ. ಇ- ವೀಸಾ ಪಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಇದರ ಸಿಂಧುತ್ವ ಸುಧೀರ್ಘವಾಗಿರುತ್ತದೆ. ಆದರೆ, ಇ-ವೀಸಾ ಅಲ್ಪಾವಧಿಯಾಗಿರುತ್ತದೆ. ಇದನ್ನು ಹೆಚ್ಚಾಗಿ ಪ್ರವಾಸಿಗಳ ಮತ್ತು ತುರ್ತು ಸಂದರ್ಭದ ಅನುಕೂಲಕ್ಕೆ ಬಳಸಲಾಗುತ್ತದೆ. ಇದರ ಅವಧಿ ಕೇವಲ 30 ದಿನಗಳಾಗಿರುತ್ತದೆ. ಅಂದಹಾಗೆ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ 2 ಬಾರಿ ಇ -ವೀಸಾ ಪಡೆಯಬಹುದು.
ಇ-ವೀಸಾ ಪಡೆಯುವ ಪ್ರಕ್ರಿಯೆ ಕೂಡ ತೀರಾ ಸರಳವಾಗಿದೆ. ಅಂದರೆ ವಿದೇಶಿಗರು ಭಾರತದ ವಿಮಾನ ಏರುವ ಮುನ್ನ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರ ಬಯೋಮೆಟ್ರಿಕ್ ಮಾಹಿತಿ ಸಂಗ್ರಹಿಸಿ ವೀಸಾದ ಸ್ಟಿಕ್ಕರನ್ನು ಪಾಸ್‌ಪೋರ್ಟ್‌ನ ಮೇಲೆ ಒಳಗೆ ಇರಿಸಲಾಗುತ್ತದೆ. ಭಾರತದಲ್ಲಿ ಇಳಿದ ಬಳಿಕ ಇಲ್ಲಿನ ಇಮಿಗ್ರೇಶನ್ ಅಧಿಕಾರಿಗಳು ಅದನ್ನು ಪರಿಶೀಲಿಸಿ ನಿಲ್ದಾಣದಿಂದ ಹೊರಗೆ ಹೊಗಲು ಅವಕಾಶ ಕಲ್ಪಿಸುತ್ತಾರೆ.
ರಾಜ್ಯದ ಬೆಂಗಳೂರಿನಲ್ಲಿ ಮಾತ್ರ ಇ-ವೀಸಾ ಸೌಲಭ್ಯವಿದೆ. ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಮಂಗಳೂರಿನ ಪ್ರವಾಸೋದ್ಯಮ ಮಾತ್ರವಲ್ಲ ತುರ್ತು ವೈದ್ಯಕೀಯ ಚಿಕಿತ್ಸೆಗೂ ಇದು ಹೆಚ್ಚು ಅನುಕೂಲವಾಗಲಿದೆ.
ಅಭಿನಂದನೆ:
ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಸೌಲಭ್ಯಕ್ಕೆ ಅನುಮತಿ ನೀಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರಿಗೆ ಜಿಲ್ಲೆಯ ಜನತೆಯ ಪರವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಇ-ವೀಸಾ ಪರಿಶೀಲನಾ ಸೌಲಭ್ಯವಿಲ್ಲದ ಕಾರಣ ವಿದೇಶದಿಂದ ಇ-ವೀಸಾ ಮೂಲಕ ನೇರ ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ಮಂಗಳೂರು ನಿಲ್ದಾಣಕ್ಕೆ ಇ-ವೀಸಾ ಸೌಲಭ್ಯ ಕಲ್ಪಿಸುವಂತೆ ಸಂಬಂಧಪಟ್ಟ ಸಚಿವಾಲಯಗಳಿಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಇ-ವೀಸಾ ಸೌಲಭ್ಯ ಅನುಷ್ಠಾನವಾಗುವ ಮೂಲಕ ಹೊರದೇಶದ ಪ್ರವಾಸಿಗರು, ಉದ್ಯಮಿಗಳು ಹಾಗೂ ವೈದ್ಯಕೀಯ ಚಿಕಿತ್ಸೆಗೆ ಬರುವವರು ನೇರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಬಹುದಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಮಂಗಳೂರು ನಗರದ ಬೆಳವಣಿಗೆಗೆ ಇದು ಅವಕಾಶ ತೆರೆದಿಡಲಿದೆ ಎಂದು ಸಂಸದರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.