ಮಂಗಳೂರು -ಚೆರ್ವತ್ತೂರು ನಡುವೆ ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭ
ಮಂಗಳೂರು.ಮಾ,31:ಮಂಗಳೂರು -ಚೆರ್ವತ್ತೂರು ನಡುವೆ ವಿದ್ಯುತ್ ಚಾಲಿತ ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ. ಮಂಗಳೂರು ಸೆಂಟ್ರಲ್‌ನಿಂದ 16:20ಕ್ಕೆ ( ಸಂಜೆ .4:20ಕ್ಕೆ ) 12686 ಸಂಖ್ಯೆಯ ವಿದ್ಯುತ್ ಚಾಲಿತ ರೈಲು ಪ್ರಥಮ ಬಾರಿಗೆ ಮಂಗಳೂರಿನಿಂದ ವಿದ್ಯುದ್ಧೀಕರಣಗೊಂಡ ಹಳಿಯ ಮೇಲೆ ಚೆರ್ವತ್ತೂರಿಗೆ ಸಾಗಿತು.
ಆರು ವರ್ಷಗಳ ಹಿಂದೆ ಆರಂಭಗೊಂಡಿದ್ದ ಮಂಗಳೂರು -ಶೋರ್ನೂರು ನಡುವಿನ 315 ಕಿ ಮೀ ದೂರದ ರೈಲು ಹಳಿಗಳ ವಿದ್ಯದ್ಧೀಕರಣ ಯೋಜನೆ ಮೂರು ಹಂತದಲ್ಲಿ ಸಾಗಿ ಸದ್ಯ ಪೂರ್ಣಗೊಂಡಿದೆ.ಪ್ರಥಮ ಹಂತದಲ್ಲಿ ಶೋರ್ನೂರು -ಕಲ್ಲಾಯಿ ನಡುವಿನ 84 ಕಿ.ಮೀ ದೂರ ಆರುವರ್ಷಗಳ ಹಿಂದೆ ಆರಂಭಗೊಂಡು 2015ರಲ್ಲಿ ಪೂರ್ಣಗೊಂಡಿತ್ತು.ಎರಡನೆ ಹಂತದಲ್ಲಿ ಕಲ್ಲಾಯಿ-ಚೆರ್ವತ್ತೂರು ನಡುವಿನ 140 ಕಿ.ಮೀ ದೂರದ ರೈಲ್ವೇ ಹಳಿಯನ್ನು ಪೂರ್ಣಗೊಳಿಸಲಾಯಿತು.
ಮೂರನೆ ಹಂತದಲ್ಲಿ ಚೆರ್ವತ್ತೂರು -ಮಂಗಳೂರು ನಡುವಿನ 91 ಕಿ.ಮೀ ದೂರದ ರೈಲ್ವೇ ಹಳಿ ವಿದ್ಯುದ್ಧೀಕರಣ ಯೋಜನೆ ಪೂರ್ಣಗೊಂಡು ಮಾರ್ಚ್ 11ರಂದು ತಪಾಸಣೆಯ ನಡೆದಿದೆ. ಇಂದು ಬೆಳಗ್ಗೆ ಚೆನ್ನೈಯಿಂದ ಆಗಮಿಸಿದ ರೈಲು ಮಂಗಳೂರು ಸೆಂಟ್ರಲ್‌ಗೆ ಆಗಮಿಸಿದ ಬಳಿಕ ಮಂಗಳೂರು ಸೆಂಟ್ರಲ್‌ನಿಂದ ರೈಲ್ವೇ ಸಮಯ 16 :20ಕ್ಕೆ ಇಲ್ಲಿಂದ ಚೆರ್ವತ್ತೂರಿಗೆ ನಿರ್ಗಮಿಸಿದೆ.
ಮುಂದಿನ ಎರಡು ವಾರದೊಳಗೆ ವಿದ್ಯದ್ಧೀಕರಣಗೊಂಡ ಹಳಿಗಳಲ್ಲಿ ಪ್ರತಿದಿನ ಎರಡರಿಂದ ಮೂರು ವಿದ್ಯುತ್ ಚಾಲಿತ ರೈಲು ಬಂಡಿ ಓಡಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.