ಮುಲ್ಕಿ: ಲಾರಿಗೆ ಗುದ್ದಿದ ಬಸ್
ಮುಲ್ಕಿ, ಮಾ.31; ಖಾಸಗಿ ಬಸ್‌ವೊಂದು ಕೆಟ್ಟು ನಿಂತಿದ್ದ ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಮುಲ್ಕಿ ರಾ.ಹೆ. 66ರ ಕ್ಷೀರ ಸಾಗರದ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದವರು ಮತ್ತು ಗಾಯಾಳುಗಳ ನಿಖರ ಮಾಹಿತಿ ಲಭ್ಯವಾಗಿಲ್ಲ. ಎರಡು ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳು ಪೈಪೋಟಿಗೆ ಬಿದ್ದು ಅತಿ ವೇಗದಿಂದ ಮಂಗಳೂರಿನಿಂದ ಉಡುಪಿಗೆ ತೆರಳುತ್ತಿತ್ತು ಎನ್ನಲಾಗಿದೆ.
ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಲಾರಿಯನ್ನು ಗಮನಿಸದ ಬಸ್ ಚಾಲಕ ಅತಿವೇಗದಿಂದಲೇ ಬಂದು ನೇರವಾಗಿ ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆಸಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.
ಢಿಕ್ಕಿಯ ರಭಸಕ್ಕೆ ಬಸ್‌ನ ಅರ್ಧ ಭಾಗ ಸಂಪೂರ್ಣ ತೆರೆದು ಕೊಂಡಿದ್ದು, ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಯೋರ್ವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಬಸ್‌ನಲ್ಲಿದ್ದ ಸುಮಾರು 15ಕ್ಕೂ ಮಿಕ್ಕಿದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಬಸ್‌ನ ಅವಶೇಷಗಳ ಮಧ್ಯೆ ಸಿಕ್ಕಿಹಾಕಿಕೊಂಡು ನರಳಾಡುತ್ತಿದ್ದ ಹಲವು ಪ್ರಯಾಣಿಕರನ್ನು ಸ್ಥಳೀಯರು ಮತ್ತು ವಾಹನಗಳ ಸವಾರರು ರಕ್ಷಿಸಿದ್ದು, ಎಲ್ಲರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದಿಂದ ರಸ್ತೆ ಸಂಚಾರದಲ್ಲಿ ವ್ತತ್ಯಯ ಕಂಡು ಬಂದಿದು, ತಕ್ಷಣ ಸ್ಥಳಕ್ಕಾಗಮಿಸಿ ಮುಲ್ಕಿ ಪೊಲೀಸರು ಸುಗಮ ಸಂಚಾರಕ್ಕೆ ಅನುವುಮಾಡಿ ಕೊಟ್ಟರೆಂದು ತಿಳಿದು ಬಂದಿದೆ.