×
Ad

2 ದಿನಕ್ಕೊಮ್ಮೆ ನೀರು ಪೂರೈಕೆ ಅನಿವಾರ್ಯ: ಉಡುಪಿ ನಗರಸಭೆಯಲ್ಲಿ ಚರ್ಚೆ

Update: 2017-03-31 21:39 IST

ಉಡುಪಿ, ಮಾ.31: ಉಡುಪಿ ನಗರಕ್ಕೆ ನೀರು ಪೂರೈಕೆ ಮಾಡುವ ಬಜೆ ಅಣೆಕಟ್ಟಿನಲ್ಲಿ ಕಳೆದ ಬಾರಿಗಿಂತ ಈ ಬಾರಿ ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ನೀರಿನ ಸಂಗ್ರಹವಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ 15ಎಂಎಲ್‌ಡಿ ನೀರು ಪಂಪ್ ಮಾಡಿ ಎರಡು ದಿನಕ್ಕೊಮ್ಮೆ ಸರಬರಾಜು ಮಾಡಲಾಗುತ್ತದೆ. ಹೀಗೆ ಮಾಡಿ ದರೆ ಮಾತ್ರ ಜೂ.5ರವರೆಗೆ ನೀರು ಒದಗಿಸಲು ಸಾಧ್ಯವಾಗುತ್ತದೆ ಎಂದು ಉಡುಪಿ ನಗರಸಭೆ ಇಂಜಿನಿಯರ್ ಗಣೇಶ್ ತಿಳಿಸಿದ್ದಾರೆ.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ಸದಸ್ಯರ ಪ್ರಶ್ನೆಗೆ ಅವರು ಈ ರೀತಿ ಉತ್ತರ ನೀಡಿದರು. ಸಭೆ ಆರಂಭವಾಗು ತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸದಸ್ಯ ಯಶ್ಪಾಲ್ ಸುವರ್ಣ, ನಗರಸಭೆ ಯಿಂದ ಸರಬರಾಜು ಮಾಡುವ ಟ್ಯಾಂಕರ್ ನೀರು ಕುಡಿಯಲು ಬಳಕೆ ಮಾಡಲು ಆಗುತ್ತಿಲ್ಲ. ಆದುದರಿಂದ ಎರಡು ದಿನಗಳ ಬದಲು ಪ್ರತಿದಿನ ನೀರು ಕೊಡುವಂತೆ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಗಣೇಶ್, ಈ ಬಾರಿ ನೀರಿನ ಸಂಗ್ರಹ ಬಹಳಷ್ಟು ಕಡಿಮೆ ಇದೆ. ಸದ್ಯಕ್ಕೆ 3.21 ಮೀಟರ್ ನೀರಿನ ಸಂಗ್ರಹವಿದ್ದು, ಕಳೆದ ವರ್ಷ ಈ ಪ್ರಮಾಣದ ನೀರಿನ ಸಂಗ್ರಹವು ಎ.24ಕ್ಕೆ ಇತ್ತು. ಹೀಗಾಗಿ ಈ ಬಾರಿ 24 ದಿನಗಳ ನೀರಿನ ಕೊರತೆ ಕಂಡುಬಂದಿದೆ. ಕಳೆದ ವರ್ಷ ಈ ಸಮಯಕ್ಕೆ ಪ್ರತಿದಿನ 22ಎಂಎಲ್‌ಡಿ ನೀರು ಪಂಪ್ ಮಾಡುತ್ತಿದ್ದುದರಿಂದ ಪ್ರತಿದಿನ ನೀರು ಕೊಡಲು ಸಾಧ್ಯವಾಗಿದೆ. ಜೂ.5ರವರೆಗೆ ನೀರು ಕೊಡ ಬೇಕಾದರೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವುದು ಅನಿವಾರ್ಯ ಎಂದು ತಿಳಿಸಿದರು.

ನಗರಸಭೆಯ ಒಟ್ಟು 19ಸಾವಿರ ನೀರಿನ ಸಂಪರ್ಕದಲ್ಲಿ ನೀರಿನ ಸಮಸ್ಯೆಗೆ ಸಂಬಂಧಪಟ್ಟಂತೆ ದೂರು ಬಂದಿರುವುದು ಕೇವಲ ಶೇ.0.4 ಮಾತ್ರ ಎಂದ ಅವರು, ಸಮಸ್ಯೆ ಇರುವ ಮನೆಗಳಿಗೆ ನೀರು ಸರಬರಾಜು ಮಾಡುವ ಕೆಲಸ ಸಮರ್ಪಕವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.

ಪೌರಾಯುಕ್ತ ಡಿ.ಮಂಜುನಾಥಯ್ಯ ಮಾತನಾಡಿ, ಮಣೈ ಹಾಗೂ ಸಾಣೆ ಕಲ್ಲು ಬಳಿ ನೀರಿನ ಸಂಗ್ರಹವಿದ್ದು, ಅದನ್ನು ಡ್ರೆಜ್ಜಿಂಗ್ ಮೂಲಕ ತೆಗೆಯು ವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಹೈಡ್ರೋಜನಿಕ್ ಸರ್ವೆ ಪ್ರಕಾರ ಬಜೆ ಅಣೆಕಟ್ಟು ಪ್ರದೇಶದಲ್ಲಿ ನೀರಿನ ಸಂಗ್ರಹಕ್ಕಿಂತ ಹೂಳು ಹಾಗೂ ಕಲ್ಲುಗಳಿವೆ. ಅದನ್ನು ತೆಗೆಯಬೇಕಾದರೆ ಸುಮಾರು ಎರಡು ಕೋಟಿ ವೆಚ್ಚವಾಗುತ್ತದೆ. ನಗರಸಭಾ ವ್ಯಾಪ್ತಿಯ ಮನೆಗಳಿಗೆ ತಮ್ಮಲ್ಲಿರುವ ನೀರಿನ ಮೂಲಗಳನ್ನು ಬಳಸಿಕೊಳ್ಳುವಂತೆ ತಿಳಿಸಲಾಗಿದೆ ಎಂದರು.

ಕುಡಿಯುವ ನೀರು ಸರಬರಾಜಿಗೆ ಬಂಡವಾಳ, ಮೂಲಭೂತ ಸೌಕರ್ಯ ಗಳೆಲ್ಲ ನಗರಸಭೆಯದ್ದಾಗಿರುವುದರಿಂದ ಅನಗತ್ಯವಾಗಿ ಈ ಸಂದರ್ಭದಲ್ಲಿ ಗ್ರಾಪಂಗಳಿಗೆ ನೀರು ಪೂರೈಕೆ ಮಾಡಬಾರದು. ಕೂಡಲೇ ನೀರಿನ ಪೂರೈಕೆ ಯನ್ನು ಸ್ಥಗಿತಗೊಳಿಸಬೇಕು ಎಂದು ವಿಪಕ್ಷ ನಾಯಕ ಡಾ.ಎಂ.ಆರ್.ಪೈ, ವಸಂತಿ ಶೆಟ್ಟಿ ಒತ್ತಾಯಿಸಿದರು. ಈಗಾಗಲೇ ಗ್ರಾಪಂಗಳಿಗೆ ನೀರು ಸರಬ ರಾಜು ಮಾಡುವುದನ್ನು ಕಡಿಮೆ ಮಾಡಲಾಗಿದೆ. ಇಂದಿನಿಂದ ಗ್ರಾಪಂಗಳಿಗೆ ನೀರು ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿ ಗಣೇಶ್ ಮಾಹಿತಿ ನೀಡಿದರು.

ಮಣಿಪಾಲ ಸಮೀಪದ ಶಿಂಬ್ರಾದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಮಣ್ಣು ರಾಶಿ ಹಾಕಲಾಗಿದ್ದು, ಇದರಿಂದ ಸಾಕಷ್ಟು ನೀರು ಸಂಗ್ರಹವಾಗಿದೆ. ಇದನ್ನು ಬಜೆ ಅಣೆಕಟ್ಟಿಗೆ ಪಂಪ್ ಮಾಡಿ ನಗರಸಭೆ ಬಳಸುವಂತೆ ದಿನಕರ ಶೆಟ್ಟಿ ಹೆರ್ಗ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಈಗಾ ಗಲೇ ಈ ಪ್ರಯತ್ನ ಕೂಡ ಮಾಡಲಾಗಿದೆ. ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಅದರಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ. ಹಾಗಾಗಿ ಆ ನೀರು ಬಳಸಲು ಆಗುತ್ತಿಲ್ಲ ಎಂದರು. ನೀರಿನ ಸಮಸ್ಯೆ ಕುರಿತು ಚರ್ಚಿಸಲು ಎ.1ರಂದು ವಿಶೇಷ ಸಭೆಯನ್ನು ನಡೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ದಾರಿದೀಪ ದುರಸ್ತಿ ಮಾಡದ ಬಗ್ಗೆ ದಿನಕರ ಶೆಟ್ಟಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 15ದಿನಗಳಲ್ಲಿ ದಾರಿದೀಪವನ್ನು ದುರಸ್ತಿ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸುವ ಕುರಿತ ಹಿಂದಿನ ಸಭೆಯ ನಿರ್ಣಯದ ಕುರಿತು ಯಶ್ಪಾಲ್ ಸುವರ್ಣ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ಸಿಟಿಬಸ್ ನಿಲ್ದಾಣದ ರಾಜ್‌ಟವರ್‌ನಿಂದ ಕಲ್ಸಂಕದವರೆಗೆ ವಾಹನ ನಿಲುಗಡೆಯನ್ನು ಪೊಲೀಸರು ನಿಷೇಧಿಸಿ, ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದಾರೆ. ಅದೇ ರೀತಿ ಬಿಗ್‌ಬಝಾರ್ ಎದುರು ವಾಹನ ನಿಲ್ಲಿಸದಂತೆ ಸಂಬಂಧಪಟ್ಟವರಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್ ಉಪಸ್ಥಿತರಿದ್ದರು.

'ಏ ಕುಲ್ಲುಂಬೆ' ಪದ ಬಳಸಿ ನಿಂದನೆ: ಆಕ್ರೋಶ

ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ವಾಗ್ವಾದ ನಡೆಯುತ್ತಿದ್ದಾಗ ಬಿಜೆಪಿ ಸದಸ್ಯ ಯಶ್ಪಾಲ್ ಸುವರ್ಣ, ನಾಮನಿರ್ದೇಶಿತ ಸದಸ್ಯ ಜನಾರ್ದನ ಭಂಡಾರ್ಕರ್‌ಗೆ 'ಏ ಕುಲ್ಲುಂಬೆ' ಎಂದು ಏಕವಚನದಲ್ಲಿ ನಿಂದಿಸಿರುವುದು ಆಡಳಿತ ಪಕ್ಷದ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿ ಇಡೀ ಸಭೆ ಗದ್ದಲಮಯವಾಯಿತು.

ಕುಡಿಯುವ ನೀರಿನ ಸಮಸ್ಯೆ ಕುರಿತು ಉತ್ತರ ಹೇಳುವಂತೆ ವಿಪಕ್ಷ ಸದಸ್ಯರು ಅಧ್ಯಕ್ಷರನ್ನು ಒತ್ತಾಯಿಸುತ್ತಿದ್ದಾಗ ಜನಾರ್ದನ್ ಭಂಡಾರ್ಕರ್ ಇದೇ ವಿಚಾರದಲ್ಲಿ ಮಾತನಾಡುತಿದ್ದರು. ಇದರಿಂದ ಆಕ್ರೋಶಗೊಂಡ ಯಶ್ಪಾಲ್ ಸುವರ್ಣ ಜನಾರ್ದನ್ ಭಂಡಾರ್ಕರ್‌ರನ್ನುದ್ದೇಶಿಸಿ ಱಏ ಕುಲ್ಲುಂಬೆೞ ಎಂದು ನಿಂದಿಸಿದರು.

ಯಶ್ಪಾಲ್ ಸುವರ್ಣರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಆಡಳಿತ ಪಕ್ಷದ ಸದಸ್ಯ ರಮೇಶ್ ಕಾಂಚನ್, ನಮ್ಮ ಸದಸ್ಯರ ಬಗ್ಗೆ ಬಾಯಿಗೆ ಬಂದಾಗೆ ಮಾತನಾಡಿದರೆ ಎಚ್ಚರಿಕೆ ಎಂದು ಗುಡುಗಿದರು. ಇದರಿಂದ ಸದಸ್ಯರುಗಳ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಯಶ್ಪಾಲ್ ಸುವರ್ಣ ಕ್ಷಮೆಯಾಚನೆಗೆ ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದರು. 'ನಾನು ಹೇಳಿದ್ದು ಹೌದು ಏನು ಮಾಡುತ್ತೀರಿ' ಎಂದು ಸಮರ್ಥಿಸಿಕೊಂಡ ಯಶ್ಪಾಲ್ ಸುವರ್ಣ, ಯಾವುದೇ ಕಾರಣಕ್ಕೂ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದರು.

ಈ ಮಧ್ಯೆ ಪ್ರತಿಪಕ್ಷದ ಸದಸ್ಯರು ರಮೇಶ್ ಕಾಂಚನ್ ಬೆದರಿಕೆ ಹಾಕು ತ್ತಿದ್ದಾರೆ ಎಂದು ಆರೋಪಿಸಿ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ನೀರಿಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಪೌರಾಯುಕ್ತರು, ಅಧ್ಯಕ್ಷರು ಉತ್ತರ ನೀಡಬೇಕೆ ಹೊರತು ಸದಸ್ಯರಲ್ಲ ಎಂದು ದಿನಕರ ಶೆಟ್ಟಿ ಹೆರ್ಗ ದೂರಿದರು. ಕೊನೆಗೆ ಅಧ್ಯಕ್ಷರು ಎಲ್ಲರನ್ನು ಸಮಾಧಾನ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News