ನಾಮ್ ದೇಹವನು್ನ ಉತ್ತರ ಕೊರಿಯಕೆ್ಕ ನೀಡಿದ ಮಲೇಶ್ಯ
ಗೆಲುವಿನ ನಗೆ ಬೀರಿದ ಉತ್ತರ ಕೊರಿಯ
ಕೌಲಾಲಂಪುರ, ಮಾ. 31: ಕೊನೆಗೂ ಉತ್ತರ ಕೊರಿಯದ ಬ್ಲಾಕ್‌ಮೇಲ್ ತಂತ್ರಕ್ಕೆ ಮಣಿದ ಮಲೇಶ್ಯ, ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಹತ್ಯೆಗೀಡಾದ ಕಿಮ್ ಜಾಂಗ್ ನಾಮ್‌ರ ಮೃತದೇಹ ಮತ್ತು ಕೊಲೆಗೆ ಸಂಬಂಧಿಸಿ ಪ್ರಶ್ನಿಸಬೇಕೆಂದು ಬಯಸಿದ್ದ ಮೂವರು ಉತ್ತರ ಕೊರಿಯನ್ನರನ್ನು ಶುಕ್ರವಾರ ಅವರ ದೇಶಕ್ಕೆ ಕಳುಹಿಸಿಕೊಟ್ಟಿದೆ.
ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯದಲ್ಲಿ ಬಂಧಿಯಾಗಿದ್ದ ಮಲೇಶ್ಯನ್ ಪ್ರಜೆಗಳನ್ನು ಮಲೇಶ್ಯ ವಾಪಸ್ ಪಡೆದಿದೆ.
ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ರ ಪರಿತ್ಯಕ್ತ ಸಹೋದರ ಕಿಮ್ ಜಾಂಗ್ ನಾಮ್‌ರನ್ನು ಉತ್ತರ ಕೊರಿಯದ ಗೂಢಚಾರರು ಹತ್ಯೆ ಮಾಡಿದ್ದಾರೆ ಎಂಬುದಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಗಳು ಹೇಳಿವೆ.
ಕೊಲೆಯ ಬಗ್ಗೆ ತನಿಖೆ ನಡೆಸುತ್ತಿರುವ ಮಲೇಶ್ಯ ಪೊಲೀಸರು, ಮೂವರು ಉತ್ತರ ಕೊರಿಯನ್ನರಿಂದ ಅವರು ದೇಶ ಬಿಡುವ ಮೊದಲು ಹೇಳಿಕೆಗಳನ್ನು ಪಡೆದುಕೊಂಡರು.
‘‘ಅವರಿಂದ ಏನು ಬೇಕೋ ಅದನ್ನು ನಾವು ಪಡೆದುಕೊಂಡಿದ್ದೇವೆ. ಅವರು ನಮಗೆ ಸಹಾಯ ಮಾಡಿದ್ದಾರೆ, ಹಾಗಾಗಿ ಅವರಿಗೆ ಹೋಗಲು ಅನುಮತಿ ನೀಡಲಾಗಿದೆ’’ ಎಂದು ಮಲೇಶ್ಯ ಪೊಲೀಸ್ ಮುಖ್ಯಸ್ಥ ಖಾಲಿದ್ ಅಬೂಬಕರ್ ಕೌಲಾಲಂಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು. ಅವರನ್ನು ಹಿಡಿದಿಟ್ಟುಕೊಳ್ಳಲು ಯಾವುದೇ ಕಾರಣಗಳಿರಲಿಲ್ಲ ಎಂದು ಹೇಳಿಕೊಂಡರು.
ಕಿಮ್ ಜಾಂಗ್ ನಾಮ್‌ರನ್ನು ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 13ರಂದು ವಿಎಕ್ಸ್ ನರ್ವ್ ಏಜಂಟ್ ಎಂಬ ಮಾರಕ ರಾಸಾಯನಿಕವನ್ನು ಬಳಸಿ ಇಬ್ಬರು ಮಹಿಳೆಯರು ಕೊಲೆ ಮಾಡಿದ್ದರು. ಈ ರಾಸಾಯನಿಕವನ್ನು ವಿಶ್ವಸಂಸ್ಥೆಯು ಸಮೂಹ ನಾಶಕ ಅಸ್ತ್ರಗಳ ಪಟ್ಟಿಗೆ ಸೇರಿಸಿರುವುದನ್ನು ಸ್ಮರಿಸಬಹುದಾಗಿದೆ.
ಹತ್ಯೆಯ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಮರ ತಾರಕಕ್ಕೇರಿದ ಬಳಿಕ ಒಂಬತ್ತು ಮಲೇಶ್ಯನ್ ಪ್ರಜೆಗಳನ್ನು ಉತ್ತರ ಕೊರಿಯದ ರಾಜಧಾನಿ ಪ್ಯಾಂಗ್‌ಯಾಂಗ್‌ನಲ್ಲಿ ಹಿಡಿದಿಟ್ಟುಕೊಳ್ಳಲಾಗಿತ್ತು.
ಅವರ ಬಿಡುಗಡೆಗೆ ಪ್ರತಿಯಾಗಿ ನಾಮ್ ಮೃತದೇಹವನ್ನು ಮಲೇಶ್ಯ ಗುರುವಾರ ಉತ್ತರ ಕೊರಿಯಕ್ಕೆ ಬಿಟ್ಟುಕೊಟ್ಟಿತ್ತು.
ಕೊಲೆಗೆ ಸಂಬಂಧಿಸಿ ಇಂಡೋನೇಶ್ಯ ಮತ್ತು ವಿಯೆಟ್ನಾಮ್‌ಗಳ ಇಬ್ಬರು ಮಹಿಳೆಯರನ್ನು ಮಲೇಶ್ಯ ಈಗಾಗಲೇ ಬಂಧಿಸಿದೆ. ಆದರೆ, ಅವರನ್ನು ಉತ್ತರ ಕೊರಿಯದ ಏಜಂಟರು ದಾಳಗಳಾಗಿ ಬಳಸಿಕೊಂಡಿದ್ದಾರೆ ಎಂಬುದಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಏಕಕಾಲದಲ್ಲಿ ವಿಮಾನಗಳ ಹಾರಾಟ
ಪ್ಯಾಂಗ್‌ಯಾಂಗ್‌ನಲ್ಲಿ ಬಂಧಿಯಾಗಿದ್ದ ಒಂಬತ್ತು ಮಲೇಶ್ಯನ್ನರು ಶುಕ್ರವಾರ ಬೆಳಗ್ಗೆ ಮಲೇಶ್ಯ ವಾಯುಪಡೆಯ ಸಣ್ಣ ಬೊಂಬಾರ್ಡಿಯರ್ ವಿಮಾನವೊಂದರಲ್ಲಿ ಕೌಲಾಲಂಪುರದಲ್ಲಿ ಬಂದಿಳಿದರು.
ಈ ಹಾರಾಟಕ್ಕಾಗಿ ತನ್ನ ಸಿಬ್ಬಂದಿ ನಾಗರಿಕ ಉಡುಗೆಗಳನ್ನು ತೊಟ್ಟರು ಎಂದು ಪೈಲಟ್ ಹಸ್ರಿಝನ್ ಕಾಮಿಸ್ ಹೇಳಿದರು.
ನಾಮ್ ಮೃತದೇಹ ಮತ್ತು ಉತ್ತರ ಕೊರಿಯನ್ನರನ್ನು ಬೀಜಿಂಗ್ ಮೂಲಕ ಉತ್ತರ ಕೊರಿಯಕ್ಕೆ ಕಳುಹಿಸಿಕೊಡಲಾಗಿದೆ.
ಪ್ಲೇನ್ ಫೈಂಡರ್ ಟ್ರಾಕಿಂಗ್ ವೆಬ್‌ಸೈಟ್ ಪ್ರಕಾರ, ಮೃತದೇಹ ಮತ್ತು ಉತ್ತರ ಕೊರಿಯನ್ನರನ್ನು ಹೊತ್ತ ಮಲೇಶ್ಯನ್ ಏರ್‌ಲೈನ್ಸ್ ವಿಮಾನ ಕೌಲಾಂಪುರದಿಂದ ಬೀಜಿಂಗ್‌ಗೆ ಹೊರಟ ಕ್ಷಣದಲ್ಲೇ ಬೊಂಬಾರ್ಡಿಯರ್ ವಿಮಾನ ಪ್ಯಾಂಗ್‌ಯಾಂಗ್‌ನಿಂದ ಹಾರಾಟ ಆರಂಭಿಸಿತು.