ಎ.ಜೆ. ಆಸ್ಪತ್ರೆಗೆ ರಾಮಕೃಷ್ಣ ಬಜಾಜ್ ರಾಷ್ಟೀಯ ಗುಣಮಟ್ಟದ ಪ್ರಶಸ್ತಿ, ನರ್ಸಿಂಗ್ ಎಕ್ಸಲೆನ್ಸ್ ಪ್ರಮಾಣ ಪತ್ರ
ಮಂಗಳೂರು, ಎ.1: ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಮತ್ತೊಂದು ಸಾಧನೆಯ ಗರಿಯನ್ನು ತನ್ನದಾಗಿಸಿಕೊಂಡಿದ್ದು, ಪ್ರತಿಷ್ಠಿತ ‘ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿ’ ಹಾಗೂ ‘ನರ್ಸಿಂಗ್ ಎಕ್ಸಲೆನ್ಸ್ ಪ್ರಮಾಣಪತ್ರ’ವನ್ನು ಪಡೆದಿದೆ. ‘ನರ್ಸಿಂಗ್ ಎಕ್ಸಲೆನ್ಸ್ ಪ್ರಮಾಣಪತ್ರ’ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಹಾಗೂ ರಾಜ್ಯದ 5ನೆ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಎ.ಜೆ. ಆಸ್ಪತ್ರೆ ಪಾತ್ರವಾಗಿದೆ.
ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಯನ್ನು ಇತ್ತೀಚೆಗೆ ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಅತ್ಯುನ್ನತ ಆರ್ಥಿಕ ಮತ್ತು ಸಂಶೋಧನಾ ವಿದ್ವಾಂಸರ ಸಮ್ಮುಖದಲ್ಲಿ ಪದ್ಮವಿಭೂಷಣ ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಡಾ.ಮಶೇಲ್ಕರ್ ಪ್ರದಾನ ಮಾಡಿದರು.
ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಯು ಪ್ರಖ್ಯಾತ ಸಂಸ್ಥೆಯಾಗಿರುವ ಭಾರತೀಯ ಮರ್ಚೆಂಟ್ ಚೇಂಬರ್ ನೀಡುವ ಪ್ರಶಸ್ತಿಯಾಗಿದೆ. ಬಹುತೇಕ ಅಗ್ರ ಮತ್ತು ವಾಣಿಜ್ಯ ಕಂಪೆನಿಗಳು ಈ ಸಂಸ್ಥೆಯ ಸದಸ್ಯತ್ವವನ್ನು ಹೊಂದಿದೆ. ಈ ಪ್ರಶಸ್ತಿಯನ್ನು ಏಶ್ಯಾದ್ಯಂತ ಗುಣಮಟ್ಟ ಜಾಗೃತ ಸಂಸ್ಥೆಗಳನ್ನು ಗುರುತಿಸುವ ಉದ್ದೇಶದಿಂದ ಸ್ಥಾಪಿತವಾಗಿದೆ. ಈ ಪ್ರಶಸ್ತಿಯ ಆಯ್ಕೆಯು ಕಠಿಣ ಪ್ರಕ್ರಿಯೆಯಿಂದ ಕೂಡಿದ್ದು, ಸುಮಾರು 9 ತಿಂಗಳು ಅನೇಕ ಉದ್ಯಮಗಳ ಮುಖ್ಯಸ್ಥರು ಮತ್ತು ಅಂತಿಮ ಹಂತದ ತೀರ್ಪುಗಾರರ ಮೌಲ್ಯಮಾಪನದ ಮೂಲಕ ನಿರ್ಧರಿತವಾಗುತ್ತದೆ. ಈ ವರ್ಷ ಸುಮಾರು 200 ವಿವಿಧ ಉದ್ಯಮಗಳಿಂದ ಈ ಪ್ರಶಸ್ತಿಗಾಗಿ ಪೈಪೋಟಿ ನಡೆದಿತ್ತು.
ರೋಗಿಗಳಿಗೆ ನೀಡಲಾಗವ ಚಿಕಿತ್ಸೆಯ ಗುಣಮಟ್ಟ, ರೋಗಿಯ ಸುರಕ್ಷತಾ ಶಿಷ್ಟಾಚಾರ, ಸೋಂಕು ನಿಯಂತ್ರಣಾ ಶಿಷ್ಟಾಚಾರ ಮತ್ತು ಪ್ರಾಯೋಗಿಕ ಫಲಿತಾಂಶಕ್ಕಾಗಿ ಎ.ಜೆ.ಆಸ್ಪತ್ರೆಯು ನರ್ಸಿಂಗ್ ಎಕ್ಸಲೆನ್ಸ್ ಪ್ರಮಾಣಪತ್ರವನ್ನು ಪಡೆದಿದೆ. ಈ ಪ್ರಶಸ್ತಿಗೆ ಪಾತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಹಾಗೂ ರಾಜ್ಯದ 5ನೆ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಎ.ಜೆ. ಆಸ್ಪತ್ರೆ ಪಾತ್ರವಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಕೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.