ಎ.5-29: ಬಿಐಟಿಯಿಂದ ಸಿಟಿಇ/ನೀಟ್ ಉಚಿತ ತರಬೇತಿ

Update: 2017-04-01 14:25 GMT

ಮಂಗಳೂರು, ಎ.1: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ) ಸಂಸ್ಥೆಯ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಎಪ್ರಿಲ್ 5ರಿಂದ 29ರವರೆಗೆ ಸಿಇಟಿ/ನೀಟ್ ಬಗ್ಗೆ ಉಚಿತ ತರಬೇತಿ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿಂದು ಸಂಸ್ಥೆಯ ಸಿಎಸ್‌ಇ ವಿಭಾಗದ ಮುಖ್ಯಸ್ಥ ಪ್ರೊ.ಮುಸ್ತಫಾ ಬಸ್ತಿಕೋಡಿ ವಿವರ ನೀಡಿದರು. ಪ್ರಸಕ್ತ ಸಾಲಿನಲ್ಲಿ 300 ವಿದ್ಯಾರ್ಥಿಗಳಿಗೆ ಈ ತರಬೇತಿ ನೀಡಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ 275 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿಗೆ ಎಪ್ರಿಲ್ 3 ಕೊನೆಯ ದಿನವಾಗಿರುತ್ತದೆ ಎಂದರು.

ಮಂಗಳೂರಿನ ಪ್ರಮುಖ ಸಿಟಿಟಿ/ನೀಟ್ ತರಬೇತಿ ಕೇಂದ್ರಗಳ ಜತೆ ಮೈತ್ರಿಯೊಂದಿಗೆ ಈ ತರಬೇತಿಯನ್ನು ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಬೋಧನಾ ಪರಿಕರಗಳನ್ನು ಒದಗಿಸಲಾಗುವುದು. ತರಬೇತಿಯ ಕೊನೆಯ ದಿನವಾದ ಎಪ್ರಿಲ್ 29ರಂದು ವೃತ್ತಿ ಮಾರ್ಗದರ್ಶನ ಹಾಗೂ ಪ್ರತಿಭಾನ್ವೇಷಣೆ ಪರೀಕ್ಷೆ ನಡೆಸಿ ಅರ್ಹ ವಿದ್ಯಾರ್ಥಿಗಳಿಗೆ ಶೇ.100 ವಿದ್ಯಾರ್ಥಿ ವೇತನ ಒದಗಿಸಲಾಗುವುದು. ಇನೋಳಿಯ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬೆಳಗ್ಗೆ 9:15ರಿಂದ ಸಂಜೆ 4:30ರವರೆಗೆ ತರಬೇತಿ ನಡೆಯಲಿದ್ದು, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಹೊರಜಿಲ್ಲೆಗಳ ವಿದ್ಯಾರ್ಥಿಗಳಿಗೆ ದಿನಕ್ಕೆ ತಲಾ 100 ರೂ.ನಂತೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದವರು ಹೇಳಿದರು.

ಎಪ್ರಿಲ್ 7ರಂದು ರಾಷ್ಟ್ರ ಮಟ್ಟದ ಅಂತರ್ ಕಾಲೇಜು ತಾಂತ್ರಿಕ ಉತ್ಸವವನ್ನು ಆಯೋಜಿಸಲಾಗಿದೆ. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ತಾಂತ್ರಿಕ ಪ್ರಬಂಧ ಮಂಡನೆ ಹಾಗೂ ತಾಂತ್ರಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಂದು ಲಕ್ಷ ರೂ.ವರೆಗೆ ಬಹುಮಾನ ಪಡೆಯಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಐಟಿಯ ಪ್ರೊ.ಡಾ.ಅಝೀಝ್ ಮುಸ್ತಫಾ, ಸಹಾಯಕ ಪ್ರೊಫೆಸರ್‌ಗಳಾದ ಝಮೀಲ್ ಅಹ್ಮದ್, ಕಿಶೋರ್ ಶಿವತ್ತಾಯ, ಬಸವರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News