×
Ad

ಕಾಸರಗೋಡಿನಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಕಾರ್ಯಾರಂಭ

Update: 2017-04-01 15:42 IST

ಕಾಸರಗೋಡು, ಎ.1: ಬಹುಕಾಲದ ಬೇಡಿಕೆಯಾದ ಕಾಸರಗೋಡು ಪಾಸ್‌ಪೋರ್ಟ್ ಸೇವಾ ಕೇಂದ್ರ ಶನಿವಾರ ಕಾರ್ಯಾರಂಭಗೊಂಡಿದೆ.
ಕಾಸರಗೋಡು ಪ್ರಧಾನ ಅಂಚೆ ಕಚೇರಿ ಕಟ್ಟಡ ಸಮುಚ್ಚಯದಲ್ಲಿ ಆರಂಭಿಸಲಾಗಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಸಂಸದ ಪಿ.ಕರುಣಾಕರನ್ ಉದ್ಘಾಟಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
  ಶಾಸಕ ಕೆ.ಕುಂಞರಾಮನ್, ಜಿಪಂ ಸದಸ್ಯೆ ಎ.ಜಿ.ಸಿ.ಬಶೀರ್, ಹೆಚ್ಚುವರಿ ದಂಡಾಧಿಕಾರಿ ಕೆ. ಅಂಬುಜಾಕ್ಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ಸಿಮೋನ್, ಜಿಲ್ಲಾಧಿಕಾರಿ ಕೆ. ಜೀವನ್ ಬಾಬು, ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹೀಂ, ಮಾಜಿ ಸಚಿವ ಸಿ.ಎಚ್.ಕುಂಞಂಬು, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಕೀಂ ಕುನ್ನಿಲ್, ಎಂ.ಸಿ.ಖಮರುದ್ದೀನ್, ಅಂಚೆ ಇಲಾಖಾ ನಿರ್ದೇಶಕ ಎ.ಥೋಮಸ್ ತಿಲಕ್‌ರಾಜ್, ಅಂಚೆ ಅಧೀಕ್ಷಕ ಕೇಶವ, ಕೆ.ಪಿ ಮಧುಸೂದನ್ ಮೊದಲಾದವರು ಉಪಸ್ಥಿತರಿದ್ದರು.

ಕಾಸರಗೋಡಿಗೆ ಪಾಸ್‌ಪೋರ್ಟ್ ಸೇವಾ ಕೇಂದ್ರ ಒದಗಿಸಬೇಕೆಂಬ ಬಗ್ಗೆ ಹತ್ತು ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಈ ಹಿಂದೆ ಕಾಸರಗೋಡಿನಲ್ಲಿ ಸೇವಾ ಕೇಂದ್ರ ಕಾರ್ಯಾಚರಿಸುತ್ತಿದ್ದರೂ ಬಳಿಕ ರದ್ದುಗೊಂಡಿತ್ತು. ಇದರಿಂದ ಕಳೆದ ಒಂದು ದಶಕಗಳಿಂದ ಪಾಸ್‌ಪೋರ್ಟ್ ಸೇವೆಗಾಗಿ 100 ಕಿ.ಮೀ. ದೂರದ ಪಯ್ಯನ್ನೂರು ಅಥವಾ ಕೋಝಿಕ್ಕೋಡ್ ಅನ್ನು ಅವಲಂಬಿಸಬೇಕಾದ ಸ್ಥಿತಿ ಉಂಟಾಗಿತ್ತು.
 ಕೊನೆಗೂ ಕೇಂದ್ರ ಸರಕಾರ ಎರಡು ತಿಂಗಳ ಹಿಂದೆ ಪಾಸ್‌ಪೋರ್ಟ್ ಸೇವಾ ಕೇಂದ್ರ ಮಂಜೂರುಗೊಳಿಸಿತ್ತು. ಆದರೆ ಸ್ಥಳದ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಕೇಂದ್ರ ಆರಂಭಿಸಲು ಅಡ್ಡಿಯಾಗಿತ್ತು. ಕೊನೆಗೆ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಕಟ್ಟಡ ದಲ್ಲಿ ಕಚೇರಿ ಕಾರ್ಯಾರಂಭಗೊಂಡಿದೆ.
  
ಈಗ ದಿನಂಪ್ರತಿ 50ರಷ್ಟು ಪಾಸ್‌ಪೋರ್ಟ್ ಅರ್ಜಿಗಳ ವಿಲೇವಾರಿ ನಡೆಯಲಿದ್ದು, ಸೆಪ್ಟ ಂಬರ್ ಬಳಿಕ ದಿನಂಪ್ರತಿ ಬರುವ ಎಲ್ಲ ಅರ್ಜಿಗಳ ವಿಲೇವಾರಿ ನಡೆಯಲಿದೆ. ಈ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸೇವಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದವರಿಗೆ ಅಂದೇ ಟೋಕನ್ ನೀಡಲಾಗುತ್ತದೆ. ಆ ಟೋಕನ್ನಲ್ಲಿ ನಿಗದಿಪಡಿಸಲಾದ ದಿನ ಮತ್ತು ಸಮಯದಲ್ಲಿ ಹಾಜರಾಗಿ ಅಗತ್ಯ ದಾಖಲೆಗಳನ್ನು ಹಾಜರುಪಡಿಸಬೇಕು. ಆನ್‌ಲೈನ್ ಮೂಲಕವೂ ಟೋಕನ್ ಪಡೆದುಕೊಳ್ಳಬಹುದೆಂದೂ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News