×
Ad

ಬಾಲಿವುಡ್ ನಟನ ಮೇಲೆ ಹಲ್ಲೆ, ಕಣ್ಣಿಗೆ ಗಂಭೀರ ಗಾಯ

Update: 2017-04-01 16:23 IST

ಮುಂಬೈ,ಎ.1: ಬಾಡಿಗಾರ್ಡ್ ಮತ್ತು ಸೋಲ್ಜರ್‌ನಂತಹ ಜನಪ್ರಿಯ ಚಿತ್ರಗಳಲ್ಲಿ ಸಹಕಲಾವಿದನಾಗಿ ಪಾತ್ರಗಳನ್ನು ನಿರ್ವಹಿಸಿರುವ ಬಾಲಿವುಡ್ ನಟ ಜೀತು ವರ್ಮಾ ಅವರ ಮೇಲೆ ರಾಜಸ್ಥಾನದ ಚಿತ್ತೋಡಗಡದಲ್ಲಿ ಗುಂಪೊಂದು ಗಂಭೀರ ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡಿರುವ ಅವರು ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ.

ವರ್ಮಾ ಅವರು ಮೌಂಟ್ ಅಬುನಿಂದ ಜೈಪುರಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಾಡಹಗಲೇ ಈ ಘಟನೆ ನಡೆದಿದೆ.

ಚಿತ್ತೋಡಗಡ ಬಳಿ ಸುಮಾರು 40 ಕಿ.ಮೀ.ಉದ್ದದ ರಸ್ತೆ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುತ್ತದೆ. ಜೀತು ಚಾಲಕನ ಪಕ್ಕದ ಆಸನದಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದರು. ಏಕಾಏಕಿ ಕೆಲವು ಸ್ಥಳೀಯರು ಕಾರಿನತ್ತ ಕಲ್ಲು ತೂರಾಟ ಆರಂಭಿಸಿದ್ದರು. ಚಾಲಕ ವೇಗವನ್ನು ಹೆಚ್ಚಿಸಿದ್ದನಾದರೂ ಕಲ್ಲು ತೂರಾಟ ನಿಂತಿರಲಿಲ್ಲ. ಒಂದು ಬೃಹತ್ ಕಲ್ಲು ಕಾರಿನ ವಿಂಡ್‌ಶೀಲ್ಡ್‌ನ್ನು ಭೇದಿಸಿ ಜೀತುರ ಕಣ್ಣಿಗೆ ಬಡಿದಿದ್ದು, ತೀವ್ರ ಗಾಯವಾಗಿದೆ ಎಂದು ಆ್ಯಕ್ಷನ್ ಡೈರೆಕ್ಟರ್ ಆಗಿರುವ ಅವರ ಸೋದರ ಮನೋಹರ ವರ್ಮಾ ತಿಳಿಸಿದರು.

ಪ್ರಥಮ ಚಿಕಿತ್ಸೆಯ ಬಳಿಕ ಜೀತು ಅವರನ್ನು ತಕ್ಷಣ ಉದಯಪುರ ವಿಮಾನ ನಿಲ್ದಾಣಕ್ಕೆ ಸಾಗಿಸಿ ಅಲ್ಲಿಂದ ಮುಂಬೈಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಿನ ಎಲುಬು ಮುರಿದಿದ್ದು,ಗಾಯಕ್ಕೆ 10 ಹೊಲಿಗೆಗಳನ್ನು ಹಾಕಬೇಕಾಯಿತು. ಕಣ್ಣಿನ ರೆಟಿನಾ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದರು.

ಸಂಕಷ್ಟ ಸಮಯದಲ್ಲಿ ನಟನ ಕುಟುಂಬಕ್ಕೆ ನೆರವಾಗಿರುವ ಬಾಲಿವುಡ್ ತಾರೆ ಸುನೀಲ್ ಶೆಟ್ಟಿ ಅವರು ಗಾಯಾಳುವನ್ನು ಮುಂಬೈಗೆ ಕರೆತರುವ ಎಲ್ಲ ವ್ಯವಸ್ಥೆಗಳನ್ನು ಸ್ವತಃ ಮುಂದೆ ನಿಂತು ಮಾಡಿದ್ದರು ಎಂದು ಜೀತುರ ಪತ್ನಿ ಕುಸುಮ್ ತಿಳಿಸಿದರು.

‘ಪದ್ಮಾವತಿ’ ಚಿತ್ರದ ಶೂಟಿಂಗ್ ಸಂದರ್ಭ ಸಂಜಯ ಲೀಲಾ ಬನ್ಸಾಲಿಯವರ ಮೇಲೆ ಹಲ್ಲೆಯೂ ಸರಿಸುಮಾರು ಇದೇ ಪ್ರದೇಶದಲ್ಲಿ ನಡೆದಿತ್ತು.

ಡಝನ್‌ಗೂ ಅಧಿಕ ಕುದುರೆಗಳ ಮಾಲಕನಾಗಿರುವ ಜೀತು ವರ್ಮಾ (49) ಬಾಲಿವುಡ್ ಗಣ್ಯರಿಗೆ ಕುದುರೆ ಸವಾರಿಯನ್ನು ಕಲಿಸುವ ಅಕಾಡಮಿಯನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News