ಆ್ಯಂಟಿ ರೋಮಿಯೊ ದಳ ಯುವಕನ ತಲೆ ಬೋಳಿಸಿದ ವೀಡಿಯೊ ವೈರಲ್,ಮೂವರು ಪೊಲೀಸರ ಅಮಾನತು
ಶಹಜಾನ್‌ಪುರ(ಉ.ಪ್ರ),ಎ.1: ಶಹಜಾನ್‌ಪುರದಲ್ಲಿ ಆ್ಯಂಟಿ ರೋಮಿಯೊ ದಳದ ಉಪಸ್ಥಿತಿಯಲ್ಲಿ ಯುವಕನೋರ್ವನ ತಲೆಯನ್ನು ಬೋಳಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ‘ಅವನು ತಪ್ಪು ಮಾಡಿದ್ದಾನೆ,ಮತ್ತೊಮ್ಮೆ ಅದನ್ನು ಮಾಡುವುದಿಲ್ಲ ’ ಎಂದು ಧ್ವನಿಯೊಂದು ವೀಡಿಯೊದಲ್ಲಿ ಹೇಳುತ್ತಿದ್ದರೆ ತಲೆಯನ್ನು ಬೋಳಿಸುತ್ತಿರುವವರ ಕೈಗೆ ಒಪ್ಪಿಸಿ ಮಹಿಳೆಯನ್ನು ಚುಡಾಯಿಸಿದ ಆರೋಪ ಹೊತ್ತು ನೆಲದ ಮೇಲೆ ಕುಳಿತಿದ್ದ ಯುವಕ,‘ಇಲ್ಲ ಸರ್, ಮತ್ತೆ ಅಂತಹ ತಪ್ಪು ಮಾಡುವುದಿಲ್ಲ’ ಎಂದು ಅಲವತ್ತುಕೊಳ್ಳು ತ್ತಿರುವ ದೃಶ್ಯ ಈ ವೀಡಿಯೊದಲ್ಲಿದೆ.
ಮಾ.22ರಂದು ಚಿತ್ರೀಕರಿಸಲಾದ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರ ಆಕ್ರೋಶದ ನಡುವೆಯೇ ವೀಡಿಯೊದಲ್ಲಿರುವ ಮೂವರು ಪೊಲಿಸರನ್ನು ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಯುವಜೋಡಿಯೊಂದು ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡಿದ್ದು, ಯುವಕನ ತಲೆಯನ್ನು ಬೋಳಿಸುವಂತೆ ಕೆಲವು ಸ್ಥಳೀಯರು ಆದೇಶಿಸಿದ್ದರು. ಆ್ಯಂಟಿ ರೋಮಿಯೊ ದಳದ ಪೊಲೀಸರಾದ ಸುಹೈಲ್,ಲಾಯಿಕ್ ಮತ್ತು ಸೋನು ಸ್ಥಳದಲ್ಲಿ ಉಪಸ್ಥಿತ ರಿದ್ದರಾದರೂ ಗುಂಪನ್ನು ತಡೆಯುವ ಗೋಜಿಗೆ ಹೋಗಿರಲಿಲ್ಲ. ವಿಷಯವನ್ನು ಸ್ಥಳೀಯ ಠಾಣಾಧಿಕಾರಿಯ ಗಮನಕ್ಕೆ ತರಲಾಗಿತ್ತಾದರೂ ಅವರೂ ಯಾವದೇ ಕ್ರಮ ಕೈಗೊಳ್ಳುವ ಗೋಜಿಗೆ ಹೋಗಿರಲಿಲ್ಲ ಎಂದು ಅಧಿಕಾರಿಯೋರ್ವರು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಪುರುಷರಿಂದ ಕಿರುಕುಳ,ಚುಡಾವಣೆಗಳನು ತಡೆಯಲೆಂದು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಆದೇಶದ ಮೇರೆಗೆ ಆ್ಯಂಟಿ ರೋಮಿಯೊ ದಳವು ಅಸ್ತಿತ್ವಕ್ಕೆ ಬಂದಿದೆ. ಆದರೆ ದಳದ ಸಿಬ್ಬಂದಿಗಳು ದೌರ್ಜನ್ಯಗಳನ್ನು ನಡೆಸುತ್ತ ಕಿರುಕುಳ ನೀಡುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿಬಂದಿವೆ. ಹಲವಾರು ಯುವಕರಿಗೆ ಬೈಠಕ್ ತೆಗೆಯುವಂತಹ ಶಿಕ್ಷೆಗಳನ್ನು ನೀಡಿ ಪೊಲೀಸರು ಆನಂದಿಸುತ್ತಿದ್ದಾರೆ. ರಾಮಪುರದಲ್ಲಿ ಪೊಲೀಸ್ ಕಾನ್‌ಸ್ಟೇಬಲ್‌ನೋರ್ವ ಸೋದರ ಸಂಬಂಧಿಗಳನ್ನು ಹಿಡಿದು ಅವರನ್ನು ಬಿಡುಗಡೆಗೊಳಿಸಲು ಲಂಚ ಕೇಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ದೂರುಗಳ ಹಿನ್ನಲೆಯಲ್ಲಿ ಡಿಜಿಪಿ ಜಾವೀದ್ ಅಹ್ಮದ್ ಅವರು ಯಾರಿಗೂ ವಿನಾಕಾರಣ ಕಿರುಕುಳ ನೀಡದಂತೆ ಮತ್ತು ತಲೆ ಬೋಳಿಸುವ, ಮುಖಕ್ಕೆ ಮಸಿ ಬಳಿಯುವಂತಹ ಕೃತ್ಯಗಳನ್ನು ನಡೆಸದಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ. ಜೋಡಿಗಳಿಗೆ ತೊಂದರೆ ಮತ್ತು ನೈತಿಕ ಪೊಲೀಸಗಿರಿಯ ವಿರುದ್ಧ ಆದಿತ್ಯನಾಥ ಅವರೂ ಆ್ಯಂಟಿ ರೋಮಿಯೊ ದಳಗಳಿಗೆ ಎಚ್ಚರಿಕೆ ನೀಡಿದ್ದಾರೆ.