×
Ad

​ಪಿಲಾರು: ವಿರೋಧದ ನಡುವೆಯೂ ಕೊಳವೆ ಬಾವಿ ನಿರ್ಮಾಣ

Update: 2017-04-01 19:33 IST

ಉಳ್ಳಾಲ, ಎ.1: ಚೆಂಬುಗುಡ್ಡೆ ಪಿಲಾರ್ ಎಂಬಲ್ಲಿ ಸ್ಥಳೀಯರ ವಿರೋಧದಿಂದ ಸ್ಥಗಿತಗೊಂಡಿದ್ದ ಚೆಂಬುಗುಡ್ಡೆ ಪಿಲಾರಿನ ಬೋರ್‌ಕಾಮಗಾರಿಯು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶನಿವಾರದಂದು ಮತ್ತೆ ನಡೆದಿದ್ದು ,ಈ ಮಧ್ಯೆ ಸ್ಥಳೀಯರು ಮತ್ತು ಉಳ್ಳಾಲ ನಗರಸಭಾ ಸದಸ್ಯರ ನಡುವೆ ವಾಗ್ವಾದ ನಡೆದಿದ್ದು ಉಳ್ಳಾಲ ಪೊಲೀಸರ ಮಧ್ಯಸ್ಥಿಕೆಯಲ್ಲಿ ಬೋರ್‌ಕಾಮಗಾರಿಯು ನಡೆದಿದೆ.

ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿಯ ಆದೇಶದಂತೆ ಚೆಂಬುಗುಡ್ಡೆ ಪಿಲಾರಿನಲ್ಲಿ ಮತ್ತೆ ಬೋರ್‌ಕಾಮಗಾರಿ ನಡೆಸಲು ಯಂತ್ರವನ್ನು ತರಿಸಲಾಗಿತ್ತು. ಇದನ್ನು ಸ್ಥಳೀಯ ಜನರು ವಿರೋಧಿಸಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಣೆಗೊಂಡು ಕಾಮಗಾರಿಗೆ ತಂದಿದ್ದ ಪೈಪ್‌ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನಗರಸಭೆ ಸದಸ್ಯರು ಮತ್ತು ಜನರ ನಡುವೆ ಮಾತಿಗೆ ಮಾತು ಬೆಳೆದು ಕೆಲ ಕಾಲ ಗೊಂದಲ ಸೃಷ್ಟಿಯಾಯಿತು.

ಬಳಿಕ ಸ್ಥಳಕ್ಕಾಗಮಿಸಿದ ಉಳ್ಳಾಲ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಅವರು ಸ್ಥಳೀಯರಲ್ಲಿ ಮಾತುಕತೆ ನಡೆಸಿ ಈ ಹಿಂದೆ ತೋಡಿದ್ದ ಬೋರನ್ನು ನಿಷ್ಕ್ರಿಯಗೊಳಿಸಿ ಅದರ ಪೈಪ್‌ಗಳನ್ನೇ ಅಳವಡಿಸಿ ಹೊಸ ಬೋರನ್ನು ತೋಡುವುದರೊಂದಿಗೆ ಸ್ಥಳೀಯರಿಗೂ ನೀರಿನ ಸಂಪರ್ಕ ನೀಡುವಂತೆ ನಗರಸದಸ್ಯರಿಗೆ ಸೂಚಿಸಿದರು.

ಇನ್ಸ್‌ಪೆಕ್ಟರ್ ಮಾತಿಗೆ ಒಪ್ಪಿದ ಸ್ಥಳೀಯರು ಪ್ರತಿಭಟನೆಯಿಂದ ಹಿಂದೆಗೆದು ಬೋರ್‌ ಕಾಮಗಾರಿಗೆ ಅವಕಾಶ ಕಲ್ಪಿಸಿಕೊಟ್ಟರು.

Writer - ಕೊಳವೆ ಬಾವಿ ನಿರ್ಮಾಣ

contributor

Editor - ಕೊಳವೆ ಬಾವಿ ನಿರ್ಮಾಣ

contributor

Similar News