×
Ad

ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ

Update: 2017-04-01 19:42 IST

ಗಾಝಿಯಾಬಾದ್,ಎ.1: ಇಲ್ಲಿಯ ಇಂದಿರಾಪುರಮ್‌ನಲ್ಲಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅರ್ಚಕರೋರ್ವರ ಐದು ವರ್ಷದ ಪುತ್ರಿಯ ಮೇಲೆ ಅತ್ಯಾಚಾರ ವೆಸಗಿ, ಹತ್ಯೆಗೈಯಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು. ಘಟನೆಯಿಂದಾಗಿ ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಬಾಲಕಿಗೆ ನೀರು ನೀಡುತ್ತ ಕೊನೆಯ ಬಾರಿಗೆ ಆಕೆಯೊಂದಿಗೆ ಕಾಣಿಸಿಕೊಂಡಿದ್ದ 19ರ ಹರೆಯದ ಯುವಕನೋರ್ವ ತಲೆಮರೆಸಿಕೊಂಡಿದ್ದು,ಆತನಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

 ಅರ್ಚಕರು ಗೋರಖಪುರ ಮೂಲದವರಾಗಿದ್ದು, ಹತ ಬಾಲಕಿ ಅವರ ನಾಲ್ವರು ಮಕ್ಕಳಲ್ಲಿ ಹಿರಿಯವಳಾಗಿದ್ದಳು. ಅವಳನ್ನು ಶಾಲೆಗೆ ಸೇರಿಸಲು ಹೆತ್ತವರು ಸಿದ್ಧತೆಗಳನ್ನು ನಡೆಸುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ. ಶನಿವಾರ ಬೆಳಿಗ್ಗೆ ಬಾಲಕಿಯ ಅಂತ್ಯಸಂಸ್ಕಾರ ನಡೆಸಲಾಯಿತು.

ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲ್ಲಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ, ಆದರೆ ಮರಣೋತ್ತರ ಪರೀಕ್ಷೆ ವರದಿಯು ಕೈಸೇರಿದ ಬಳಿಕವಷ್ಟೇ ಇದು ದೃಢಪಡಬೇಕಾಗಿದೆ. ಶಂಕಿತ ಯುವಕ ತಲೆಮರೆಸಿಕೊಂಡಿದ್ದು, ಆತನ ತಂದೆ ಪೊಲೀಸರ ವಶದಲ್ಲಿದ್ದಾನೆ ಎಂದು ಗಾಝಿಯಾಬಾದ್ ಎಸ್‌ಪಿ ದೀಪಕ್ ಕುಮಾರ್ ತಿಳಿಸಿದರು.

ತನ್ಮಧ್ಯೆ ಶಂಕಿತ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಕುಪಿತ ಜನರು ಪೊಲೀಸರಿಗೆ ಆಗ್ರಹಿಸಿದ ಘಟನೆಯೂ ನಡೆಯಿತು.

ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮನೆಯ ಹೊರಗೆ ಆಟವಾಡಿಕೊಂಡಿದ್ದ ಬಾಲಕಿ ಬಳಿಕ ನಾಪತ್ತೆಯಾಗಿದ್ದಳು, ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ತಡರಾತ್ರಿ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಆಕೆಯ ರಕ್ತಸಿಕ್ತ ಶವ ಪತ್ತೆಯಾಗಿತ್ತು.

ಶಂಕಿತ ಯುವಕ ಹತ್ತು ದಿನಗಳ ಹಿಂದಷ್ಟೇ ಬಿಹಾರದಿಂದ ಈ ಪ್ರದೇಶಕ್ಕೆ ಆಗಮಿಸಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News