ಗಾಂಧಿಗಿರಿಯ ಮೂಲಕ ತನ್ನ ಪ್ರೇಮವನ್ನು ಮರಳಿ ಗೆದ್ದ ಬಿಹಾರದ ಯುವತಿ
ರೋಹ್ತಾಸ್,ಎ.1: ತನ್ನ ಪ್ರೇಮಿಯಿಂದ ಪರಿತ್ಯಕ್ತಳಾಗಿ, ವರದಕ್ಷಿಣೆಯ ಗರ ಬಡಿದಿದ್ದ ಆತನ ಕುಟುಂಬದಿಂದಲೂ ತಿರಸ್ಕೃತಳಾಗಿದ್ದ ರೋಹ್ತಾಸ್ ಜಿಲ್ಲೆಯ ಶಿವಸಾಗರ್ ಬ್ಲಾಕ್‌ನ ಸಿಕ್ರೌರ್ ಗ್ರಾಮದ ದಲಿತ ಯುವತಿ ನೀತು ಪಾಸ್ವಾನ್(18) ತನ್ನ ಪ್ರಿಯಕರನ ಹೃದಯ ಪರಿವರ್ತನೆಗಾಗಿ ಗಾಂಧಿಗಿರಿಯ ಮೊರೆ ಹೋಗಿ,ಅದರಲ್ಲಿ ಯಶಸ್ವಿಯೂ ಆಗಿದ್ದಾಳೆ.
10ನೇ ತರಗತಿಯ ವಿದ್ಯಾರ್ಥಿನಿ ನೀತು ಮತ್ತು ನೆರೆಯ ಕೊಂಕಿ ಗ್ರಾಮದ ನಿವಾಸಿ ಧನಂಜಯ ಪಾಸ್ವಾನ್ ಮಧ್ಯೆ ಕಳೆದೊಂದು ವರ್ಷದಿಂದಲೂ ಪ್ರೇಮ ಸಂಬಂಧವಿತ್ತು ಮತ್ತು ಇದು ಎರಡೂ ಕುಟುಂಬಗಳಿಗೆ ತಿಳಿದಿತ್ತು. ಕಳೆದ ಮದುವೆ ಹಂಗಾಮಿನಲ್ಲಿ ಮದುವೆಯ ದಿನಾಂಕವನ್ನು ಅಂತಿಮಗೊಳಿಸಲು ನೀತುಳ ತಂದೆ ಧನಂಜಯನ ತಂದೆಯನ್ನು ಭೇಟಿಯಾಗಿದ್ದು, ಆತ ಐದು ಲಕ್ಷ ರೂ ವರದಕ್ಷಿಣೆಗೆ ಬೇಡಿಕೆ ಮಂಡಿಸಿದ್ದ. ತಂದೆಯ ತಾಳಕ್ಕೆ ಕುಣಿಯುತ್ತಿದ್ದ ಧನಂಜಯ ನೀತುಳನ್ನು ಮದುವೆಯಾಗಲು ನಿರಾಕರಿಸಿದ್ದ. ಆತನ ಮನವೊಲಿಸಲು ಎಲ್ಲ ಪ್ರಯತ್ನಗಳು ವಿಫಲಗೊಂಡ ಬಳಿಕ ನೀತುಳ ತಂದೆ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದರು. ಆದರೆ ಇದನ್ನು ನೀತು ಬಲವಾಗಿ ವಿರೋಧಿಸಿದ್ದಳು.
ಮಂಗಳವಾರ ಬೆಳಿಗ್ಗೆ ಮದುಮಗಳ ವೇಷಭೂಷಣ ಧರಿಸಿದ್ದ ನೀತು ಗ್ರ್ರಾಮಸ್ಥರೊಂದಿಗೆ ಕೊಂಕಿ ಗ್ರಾಮಕ್ಕೆ ತೆರಳಿ ಪ್ರಿಯಕರನ ಮನೆಯ ಮುಂದೆ ಧರಣಿ ಕುಳಿತಿದ್ದಳು. ತೊದಂರೆಯನ್ನು ಗ್ರಹಿಸಿದ ಧನಂಜಯನ ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದರು.
ಆದರೆ ಕೊಂಕಿ ಗ್ರ್ರಾಮಸ್ಥರೂ ನೀತುಳ ಬೆಂಬಲಕ್ಕೆ ನಿಂತಾಗ ಅವರೆಲ್ಲ ಶುಕ್ರವಾರ ವಾಪಸ್ ಆಗಿ ಆಕೆಯ ಕ್ಷಮೆ ಯಾಚಿಸಿದ್ದರು. ಅಲ್ಲಿಗೆ ಅವಳ ಗಾಂಧಿಗಿರಿ ಗೆದ್ದಿತ್ತು ಮತ್ತು ಅದೇ ದಿನ ಸಂಜೆ ಎರಡೂ ಗ್ರಾಮಗಳ ನಿವಾಸಿಗಳ ಸಂಭ್ರಮ-ಸಡಗರದ ನಡುವೆ ನೀತು ಮತ್ತು ಧನಂಜಯ ಮದುವೆ ನೆರವೇರಿತು.
ಆದರೆ ಸಮಸ್ಯೆಯನ್ನು ಬಗೆಹರಿಸಲು ಸ್ಥಳೀಯ ಪೊಲಿಸರು ಮತ್ತು ಪೌರಾಡಳಿತ ಯಾವುದೇ ಪ್ರಯತ್ನ ಮಾಡಲಿಲ್ಲ ಎಂಬ ಅಸಮಾಧಾನ ಗ್ರಾಮಸ್ಥರಲ್ಲಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಬದ್ದಿ ಠಾಣಾಧಿಕಾರಿ ದೀಪಕ್ ಝಾ ಅವರು, ಈ ವಿವಾದದಿಂದ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗಿರಲಿಲ್ಲ. ಅಲ್ಲದೆ ಇಂತಹ ವಿವಾದಗಳು ನ್ಯಾಯಾಲಯಗಳಲ್ಲಿ ಬಗೆಹರಿಯುವುದೂ ಇಲ್ಲ. ನ್ಯಾಯವನ್ನು ಪಡೆಯಲು ತನ್ನದೇ ದಾರಿಯಲ್ಲಿ ಸಾಗಿದ ನೀತುಳ ಧೈರ್ಯವನ್ನು ತಾನು ಮೆಚ್ಚಿದ್ದೇನೆ ಎಂದರು.