ದಾಖಲೆ ಪತ್ರ ಪಡೆಯಲು ಮಧ್ಯವರ್ತಿಗಳು ಬಂದಲ್ಲಿ ಪ್ರಕರಣ ದಾಖಲಿಸಿ: ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು, ಎ.1: ತಾಲೂಕು ಕಚೇರಿಗೆ ದಾಖಲೆ ಪತ್ರಗಳನ್ನು ಪಡೆಯಲು ಮಧ್ಯವರ್ತಿಗಳು ಬಂದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವ ಕ್ರಮ ಕೈಗೊಳ್ಳಿ ಎಂದು ದ.ಕ. ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್‌ರವರು ತಹಶೀಲ್ದಾರರಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಿಲ್ಲಾ ಮಟ್ಟದ ಅಹವಾಲು ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ತಾಲೂಕು ಕಚೇರಿಯಲ್ಲಿ ಯಾವುದೇ ರೀತಿಯ ದಾಖಲೆ ಪಡೆಯಲು ಹಲವು ದಿನಗಳ ಕಾಲ ಅಲೆದಾಡಬೇಕಾಗುತ್ತದೆ. ಆದರೆ ಬ್ರೋಕರ್‌ಗಳಿಗೆ ಹಳೆ ತಾಲೂಕು ಕಚೇರಿಯ ರೆಕಾರ್ಡ್ ರೂಮಿನ ಹಿಂದಿನ ಕಿಟಕಿಗಳ ಮೂಲಕ ರೆಕಾರ್ಡ್‌ಗಳನ್ನು ನೀಡಲಾಗುತ್ತದೆ ಎಂದು ದಲಿತ ಮುಖಂಡರೊಬ್ಬರು ಸಭೆಯಲ್ಲಿ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ದಾಖಲೆ ಪತ್ರಗಳು (ರೆಕಾರ್ಡ್ ರೂಂ) ಪ್ರಸ್ತುತ ಹಳೆ ಕಟ್ಟಡದಲ್ಲಿಯೇ ಇದೆ. ಅದನ್ನು ಹೊಸ ಕಚೇರಿಗೆ ಒಂದು ವಾರದೊಳಗೆ ಶಿಫ್ಟ್ ಮಾಡಲಾಗುತ್ತದೆ. ಆ ಬಳಿಕ ಪ್ರಸ್ತುತ ಇರುವ ಸಿಬ್ಬಂದಿ ಕೊರತೆಯಿಂದಾಗಿ ದಾಖಲೆ ಪತ್ರಗಳನ್ನು ಹುಡುಕುವಲ್ಲಿ ಆಗುತ್ತಿರುವ ವಿಳಂಬ ತಪ್ಪಲಿದೆ. ದಾಖಲೆ ಪತ್ರ ಬೇಕಿರುವವರು ಖುದ್ದು ಬಂದು ಅರ್ಜಿ ಸಲ್ಲಿಸಿದ್ದಲ್ಲಿ 24 ಗಂಟೆಯೊಳಗೆ ನೀಡಲು ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಖುದ್ದು ಅರ್ಜಿದಾರರಲ್ಲದೆ ಬ್ರೋಕರ್‌ಗಳು ರೆಕಾರ್ಡ್‌ಗಾಗಿ ಬಂದಲ್ಲಿ ತಕ್ಷಣ ತಹಶೀಲ್ದಾರ್‌ರವರು ಅವರ ಮೇಲೆ ಪ್ರಕರಣ ದಾಖಲಿಸಿ ಬಂಧನ ಮಾಡುವ ಕ್ರಮಕ್ಕೂ ಹಿಂಜರಿಯಬಾರದು ಎಂದು ಸೂಚನೆ ನೀಡಿದರು.
ಹೊಸ ರೆಕಾರ್ಡ್ ರೂಂನ ಎಲ್ಲಾ ಕಿಟಕಿಗಳೂ ಮೆಸ್ ಅಳವಡಿಸುವ ಮೂಲಕ ಯಾವುದೇ ರೀತಿಯಲ್ಲಿ ಬ್ರೋಕರ್ ವ್ಯವಸ್ಥೆಗೆ ಅನುವು ಮಾಡಿಕೊಡಬಾರದು ಎಂದು ಅವರು ಸಲಹೆ ನೀಡಿದರು.
ಪೆರ್ಮನ್ನೂರು ಡಿಸಿ ಮನ್ನಾ ಭೂಮಿ ಅರ್ಹರಿಗೆ ಒದಗಿಸಲು ಸೂಚನೆ:
ಪೆರ್ಮನ್ನೂರು ಗ್ರಾಮದ ಸರ್ವೆ ನಂಬ್ರ 102ರ 5.33 ಎಕರೆ ಡಿಸಿ ಮನ್ನಾ ಜಮೀನಿನಲ್ಲಿ ವಾಸಿಸುತ್ತಿರುವ ಎಸ್‌ಸಿ/ಎಸ್‌ಟಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು. ಉಳಿದ ಜಾಗದಲ್ಲಿ ಅರ್ಹ ಎಸ್‌ಸಿ ಎಸ್‌ಟಿ ಸಮುದಾಯದವರಿಗೆ ಹಂಚುವ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಆ ಜಾಗದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಇತರರು ವಾಸವಾಗಿದ್ದಲ್ಲಿ ಅವರ ಮಾಹಿತಿಯನ್ನು ಸಂಗ್ರಹಿಸಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಈ ಕಾರ್ಯವನ್ನು ಒಂದು ತಿಂಗಳೊಳಗೆ ಮಾಡದಿದ್ದರೆ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಾರ್ವತಿ ಎಂಬವರು ಕಳೆದ ಸಭೆಯಲ್ಲಿ ಸಲ್ಲಿಸಿದ್ದ ದೂರಿಗೆ ಪೂರಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಈ ಆದೇಶ ನೀಡಿದರು.
ದೇವಸ್ಥಾನಗಳಲ್ಲಿ ಸ್ವಚ್ಚತಾ ಕೆಲಸಗಾರರಿಗೆ ಕನಿಷ್ಠ ವೇತನಕ್ಕೆ ಸೂಚನೆ:
ದೇವಸ್ಥಾನಗಳಲ್ಲಿ ಸ್ವಚ್ಚತಾ ಕಾರ್ಯವನ್ನು ನಿರ್ವಹಿಸುವವರಿಗೆ ಕನಿಷ್ಠ ವೇತನವನ್ನು ನೀಡುವಂತೆ ದತ್ತಿ ಇಲಾಖೆಗೆಗೊಳಪಡುವ ದೇವಾಲಯಗಳಿಗೆ ಲಿಖಿತವಾಗಿ ಸೂಚನೆ ನೀಡುವಂತೆ ಜಿಲ್ಲಾಧಿಕಾರಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಕದ್ರಿ ದೇವಸ್ಥಾನದಲ್ಲಿ ಶುಚಿತ್ವ ವಿಭಾಗದಲ್ಲಿ ಪೌರಕಾರ್ಮಿಕರಾಗಿ ದುಡಿಯುತ್ತಿರುವವರಿಗೆ ಕನಿಷ್ಠ ವೇತನ ನೀಡಲಾಗುತ್ತಿಲ್ಲ ಎಂದು ಕಳೆದ ಸಭೆಯಲ್ಲಿ ವ್ಯಕ್ತವಾಗಿದ್ದ ದೂರಿಗೆ ಈ ಸೂಚನೆಯನ್ನು ಜಿಲ್ಲಾಧಿಕಾರಿ ನೀಡಿದರು.
ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಪ್ರಮೀಳಾ ಪ್ರತಿಕ್ರಿಯಿಸಿ, ಪ್ರಸ್ತುತ ದತ್ತಿ ಇಲಾಖೆಗೊಳಪಡುವ ದೇವಾಲಯಗಳಲ್ಲಿ 2012ರಲ್ಲಿ ನಿಗದಿಪಡಿಸಲಾದಂತೆ ಸಿಬ್ಬಂದಿಗಳಿಗೆ ವೇತನವನ್ನು ನೀಡಲಾಗುತ್ತಿದೆ. ಈ ಬಗ್ಗೆ ಪರಿಷ್ಕರಣೆಗೆ ಪ್ರಸ್ತಾವನೆಯು ರಾಜ್ಯ ಮಟ್ಟದ ದತ್ತಿ ಇಲಾಖೆಯಲ್ಲಿ ಚರ್ಚೆಯಲ್ಲಿದೆ ಎಂದರು.
ಗಣರಾಜ್ಯೋತ್ಸವ, ಸ್ವಾತಂತ್ರ ದಿನಾಚರಣೆ ಸೇರಿದಂತೆ ರಾಷ್ಟ್ರೀಯ ಹಬ್ಬಗಳಿಗೆ ದಲಿತ ಮುಖಂಡರಿಗೆ ಆಹ್ವಾನ ನೀಡಲಾಗುತ್ತಿಲ್ಲ ಎಂಬ ದಲಿತ ನಾಯಕರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಮುಂದಿನ ದಿನಗಳಲ್ಲಿ ಎಲ್ಲಾ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳಿಗೆ ದಲಿತ ನಾಯಕರಿಗೆ ಕಡ್ಡಾಯವಾಗಿ ಆಹ್ವಾನ ನೀಡಬೇಕೆಂದು ನಿರ್ದೇಶಿಸಿದರು.
ಅಂಬೇಡ್ಕರ್ ವೃತ್ತದ ಬಳಿ ಜ್ಯೋತಿ ವೃತ್ತ ಎಂದು ಇದ್ದಲ್ಲಿ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸೂಚಿಸಿದ ಜಿಲ್ಲಾಧಿಕಾರಿ, ಎಲ್ಲಾ ಖಾಸಗಿ ಹಾಗೂ ಸರಕಾರಿ ಬಸ್ಸುಗಳಲ್ಲಿ ಜ್ಯೋತಿ ಬದಲಿಗೆ ಅಂಬೇಡ್ಕರ್ ವೃತ್ತವೆಂದೇ ಬರೆಸಲು ಆರ್‌ಟಿಒ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ, ಡಿಸಿಪಿ ಶಾಂತರಾಜು, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಡಾ. ಸಂತೋಷ್ ಕುಮಾರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಪುತ್ತೂರು ಹಾಗೂ ಮಂಗಳೂರು ಸಹಾಯಕ ಆಯುಕ್ತರು ಉಪಸ್ಥಿತರಿದ್ದರು.