ಸಕಾರಣವಿಲ್ಲದೆ ಕೊರಗ- ಮಲೆಕುಡಿಯರ ನಿವೇಶನ ಅರ್ಜಿ ತಿರಸ್ಕೃತವಾಗಬಾರದು: ಕೆ.ಜಿ. ಜಗದೀಶ್
ಮಂಗಳೂರು, ಎ.1: ದ.ಕ. ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಹಾಗೂ ಮಲೆಕುಡಿಯ ಸಮುದಾಯದವರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ತಾಲೂಕು ಮಟ್ಟದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕೊರಗ ಜನಾಂಗದವರಿಗೆ ನಿವೇಶನ ಮಂಜೂರಾತಿ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಕಾಲೂಕು ವ್ಯಾಪ್ತಿಯಲ್ಲಿ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಹಾಗೂ ನಗರಗಳಲ್ಲಿ ನಗರ ಮುಖ್ಯ ಅಧಿಕಾರಿಗಳ ನೇತೃತ್ವದ ವಿಶೇಷ ಸಭೆ ನಡೆಸಿ ಕೊರಗ ಹಾಗೂ ಮಲೆಕುಡಿಯ ಕುಟುಂಗಳಿಗೆ ನಿವೇಶ ಹಂಚಿಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸಮಗ್ರ ಗಿರಿಜನ ಕಲ್ಯಾಣ ಅಧಿಕಾರಿಗೆ (ಐಟಿಡಿಪಿ)ಸೂಚನೆ ನೀಡಿದರು.
ಫಲಾನುಭವಿಗಳು ಕಡಿಮೆ ಇದ್ದಲ್ಲಿ, ಜಾಗ ಲಭ್ಯವಿರುವ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಕುಟುಂಬಕ್ಕೆ ಕನಿಷ್ಠ 30*40 ಸೈಟ್‌ನಡಿ ನಿವೇಶನ ಮಂಜೂರು ಮಾಡಬೇಕು. ಯಾವುದೇ ಕಾರಣಕ್ಕೂ ಈ ಸಮುದಾಯದಿಂದ ನಿವೇಶನ ಕೋರಿ ಬಂದ ಅರ್ಜಿಯನ್ನು ತಿರಸ್ಕೃತಗೊಳಿಸಬಾರದು. ಅಂತಹ ಸನ್ನಿವೇಶಗಳಿದ್ದಲ್ಲಿ ಅದನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು. ಸರಕಾರಿ ಜಾಗ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಭೂಮಿ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಒಟಟು 1206 ಕೊರಗ ಸಮುದಾಯಗಳನ್ನು ಗುರುತಿಸಲಾಗಿದ್ದು ಒಟ್ಟು 4858 ಜನಸಂಖ್ಯೆಯನ್ನು ಈ ಸಮುದಾಯ ಹೊಂದಿದೆ. 119 ಕಾಲನಿಗಳಲ್ಲಿ ಈ ಸಮುದಾಯ ವಾಸವಿರುವುದಾಗಿ ಐಟಿಡಿಪಿ ಅಧಿಕಾರಿ ಹೇಮಲತಾ ಸಭೆಯಲ್ಲಿ ವಿವರ ನೀಡಿದರು.
ಮಳೆಗಾಲದ ಆರು ತಿಂಗಳ ಅವಧಿಗೆ ಕೊರಗ ಹಾಗೂ ಮಲೆಕುಡಿಯ ಸಮುದಾಯದ ಕುಟುಂಬಗಳಿಗೆ ನೀಡಲಾಗುವ ಪೌಷ್ಠಿಕ ಆಹಾರ, ಕೊರಗ ಸಮುದಾಯ ಮನೆ ನಿರ್ಮಾಣ ಹಾಗೂ ಆರೋಗ್ಯ ಕಾರ್ಯಕ್ರಮದ ಕುರಿತಂತೆ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಸಮಾಜ ಕಲ್ಯಾಣ ಅಧಿಕಾರಿ ಡಾ. ಸಂತೋಷ್ ಕುಮಾರ್, ಡಿಸಿಪಿ ಶಾಂತರಾಜು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.