ಉಡುಪಿ: ನೀರು ಬಾರದ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು
ಉಡುಪಿ, ಎ.1: ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ನಗರಸಭಾ ಸದಸ್ಯರುಗಳ ಸಭೆಯೊಂದು ಇಂದು ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ವಾರ್ಡ್‌ಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ, ದಿನ ಬಿಟ್ಟು ದಿನ ಕುಡಿಯುವ ನೀರನ್ನು ಪೂರೈಕೆ ಮಾಡುವ ಬಗ್ಗೆ ನಿರ್ಧರಿಸಲಾಯಿತು. ಸಂಬಂಧಪಟ್ಟ ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಕೆ ಆಗುವ ದಿನದಂದು ನೀರು ಸರಬರಾಜು ಆಗದಿದ್ದಲ್ಲಿ ಅದೇ ದಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು.
ಇದಕ್ಕಾಗಿ ಸಾರ್ವಜನಿಕರು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: 8496989248, 8496989166, 8496989184, 8496989122. ಸಹಾಯಕ ಕಾರ್ಯಪಾಲಕ ಅಭಿಯಂತರ ಗಣೇಶ್: 8496989759, ಪರಿಸರ ಅಭಿಯಂತರ ಬಿ. ರಾಘವೇಂದ್ರ: 9448507244.
ನಗರಸಭೆ ವತಿಯಿಂದ ಟ್ಯಾಂಕರ್ ಮೂಲಕ ಸರಬರಾಜು ಆಗುವ ನೀರನ್ನು ನಗರಸಭಾ ವ್ಯಾಪ್ತಿಯ ವಿಪುಲ ನೀರಿನ ಸಂಗ್ರಹವಿರುವ ಹದಿನೈದು ಸರಕಾರಿ ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಿ ಅದರಿಂದ ತೆಗೆಯಲಾಗುತ್ತಿದೆ. ಇದಕ್ಕಾಗಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಿಯೇ ನೀರಿನ ಅಭಾವವಿರುವ ಪ್ರದೇಶ ಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಅಧ್ಯಕ್ಷರು ನುಡಿದರು.
ನಗರದಲ್ಲಿ ಅನಧಿಕೃತ ನೀರಿನ ಸಂಪರ್ಕ ಕಂಡುಬಂದಲ್ಲಿ, ನೀರನ್ನು ವಾಹನ ತೊಳೆಯಲು, ಕಟ್ಟಡ ಕಟ್ಟಲು, ಮನೆಯ ಅಂಗಳ ತೊಳೆಯಲು, ರಸ್ತೆ ತೊಳೆಯಲು ಉಪಯೋಗಿಸಿದ್ದು ಕಂಡುಬಂದಲ್ಲಿ ಅಂತಹ ನೀರಿನ ಸಂಪರ್ಕವನ್ನು ಕೂಡಲೇ ಕಡಿತಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಉಡುಪಿ ನಗರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ಸಂಗ್ರಹವಿರುವ ನೀರಿನ ಮಟ್ಟ ತೀರಾ ಕುಸಿದಿರುವುದರಿಂದ ಉಡುಪಿಯ ನಾಗರಿಕರು ನಗರಸಭೆಯೊಂದಿಗೆ ಸಹಕರಿಸಿ, ನೀರನ್ನು ಮಿತವಾಗಿ ಬಳಸುವಂತೆ ಸಭೆ ವಿನಂತಿಸಿದೆ.
ಸಭೆಯಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷೆ ಶೋಬಾ ಸುರೇಶ್, ನಗರಸಭಾ ಸದಸ್ಯರಾದ ಡಾ.ಎಂ.ಆರ್.ಪೈ, ದಿನಕರ ಶೆಟ್ಟಿ, ಚಂದ್ರಕಾಂತ ನಾಯಕ್, ಯಶ್‌ಪಾಲ್ ಸುವರ್ಣ, ನಾರಾಯಣ ಪಿ. ಕುಂದರ್, ಶ್ಯಾಮ್‌ಪ್ರಸಾದ್ ಕುಡ್ವ, ಆರ್.ಕೆ. ರಮೇಶ್, ಹರೀಶ್‌ರಾಮ್, ಸೆಲಿನ್ ಕರ್ಕಡ, ಶಾಂತರಾಮ್ ಸಾಲ್ವಂಕರ್, ಜನಾರ್ದನ ಭಂಡಾರ್ಕರ್ ಉಪಸ್ಥಿತರಿದ್ದು ಸಲಹೆ-ಸೂಚನೆಗಳನ್ನು ನೀಡಿದರು. ಪೌರಾಯುಕ್ತ ಡಿ. ಮಂಜುನಾಥಯ್ಯ ಅಧಿಕಾರಿಗಳೊಂದಿಗೆ ಭಾಗವಹಿಸಿದ್ದರು.