ಹಾಜಿ ಅಬ್ದುಲ್ಲಾ ಆಸ್ಪತ್ರೆ ಖಾಸಗೀಕರಣ: ರಾಜ್ಯ ಸರಕಾರ, ಬಿ.ಆರ್.ಶೆಟ್ಟಿ ಸಂಸ್ಥೆಗೆ ನೋಟೀಸು
ಉಡುಪಿ, ಎ.1: ಉಡುಪಿಯ ಸರಕಾರಿ ಹಾಜಿ ಅಬ್ದುಲ್ಲಾ ಸ್ಮಾರಕ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸುವ ಸರಕಾರದ ಕ್ರಮದ ವಿರುದ್ಧ ದಾನಿಗಳ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಉಡುಪಿ ನ್ಯಾಯಾಲಯದಲ್ಲಿ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸ್ವೀಕರಿಸಿರುವ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರಾಮ್‌ಪ್ರಸಾದ್ ವಿ.ಎಸ್. ಶುಕ್ರವಾರ ಕರ್ನಾಟಕ ಸರಕಾರ ಹಾಗೂ ಬಿ.ಆರ್.ಶೆಟ್ಟಿ ರಿಸರ್ಚ್ ಸಂಸ್ಥೆಯನ್ನು ಪ್ರತಿವಾದಿಯಾಗಿ ಮಾಡಿ ಸಾರ್ವಜನಿಕ ಹಿತಾಸಕ್ತಿ ದಾವೆ ಹಾಗೂ ಅರ್ಜಿಗಳಿಗೆ ಉತ್ತರಿಸುವಂತೆ ಆದೇಶಿಸಿದ್ದಾರೆ.
ಸರಕಾರ ಇತ್ತೀಚೆಗೆ ಈ ಆಸ್ಪತ್ರೆ ಸಹಿತ ಬೆಲೆ ಬಾಳುವ ಸುಮಾರು ನಾಲ್ಕು ಎಕ್ರೆ ಜಾಗವನ್ನು ಖಾಸಗಿ ಸಂಸ್ಥೆಗೆ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ ನಡೆಸಲು ಹಸ್ತಾಂತರದ ಪ್ರಕ್ರಿಯೆ ನಡೆಸಿತ್ತು. ಖಾಸಗಿಕರಣದ ಎಲ್ಲಾ ಪ್ರಕ್ರಿಯೆ ಗಳು ದಾನಿಗಳ ಮೂಲ ಉದ್ದೇಶಕ್ಕೆ ವಿರೋಧವಾಗಿದೆ ಎಂಬುದು ಅವರ ಕುಟುಂಬಸ್ಥರ ಆರೋಪವಾಗಿದೆ.
ಆದ್ದರಿಂದ ಸರಕಾರ ಮಾಡಿರುವ ಹಸ್ತಾಂತರ ಪ್ರಕ್ರಿಯೆಯನ್ನು ಪ್ರಶ್ನಿಸಿ ಹಾಜಿ ಅಬ್ದುಲ್ಲ ಕುಟುಂಬಸ್ಥರ ಸಹಿತ ಉಡುಪಿಯ ನಾಗರಿಕರು ಉಡುಪಿಯ ಸಿವಿಲ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು. ಅರ್ಜಿದಾರ ರಾಗಿ ಖುರ್ಶಿದ್ ಅಹಮ್ಮದ್, ಅರ್ಶದ್, ಹುಸೇನ್ ಕೋಡಿಬೆಂಗ್ರೆ, ಶ್ಯಾಮರಾಜ್ ಬಿರ್ತಿ, ಬೊಗ್ರ ಕೊರಗ ಕೊಕ್ಕರ್ಣೆ, ಪ್ರೊ.ಪಣಿರಾಜ್ ಕೆ., ಪ್ರೊ. ಮುರಲೀಧರ ಉಪಾಧ್ಯಾಯ, ಅಪ್ರೊಜ್‌ಬಾನು, ಬಾಲಕೃಷ್ಣ ಶೆಟ್ಟಿ, ಯು. ಕಿಶೋರ್ ಶೆಟ್ಟಿ, ಹುಸೇನ್ ಹೂಡೆ, ನಿಶಾತ್ ಪಾತಿಮಾ, ಮುಹಮ್ಮದ್ ಸಿಕಂದರ್ ಅಲಿ, ಸಿದ್ದಿಕ್ ಅಬ್ದುಲ್ ಹಾಜಿ, ಪಿ. ಮೀನಾಕ್ಷಿ ಭಂಡಾರಿ, ಇಶ್ರತ್ ಕೈರುಲ್ಲಾ, ರಮೀಜಾ ರಹಮತ್, ಸೈಹದ್ ಸಿರಾಜ್ ಅಹಮ್ಮದ್, ಸಗೀರ್ ಬಾನು ಸಾರ್ವಜನಿಕರ ಪರವಾಗಿ ದಾವೆ ಸಲ್ಲಿಸಿದ್ದಾರೆ.
ವಾದಿಗಳ ಪರವಾಗಿ ನ್ಯಾಯವಾದಿ ಎನ್. ಕೃಷ್ಣರಾಜ್ ಆಚಾರ್ಯ ನ್ಯಾಯಾಲಯದಲ್ಲಿ ವಾದಿಸುತಿದ್ದಾರೆ.
ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬರು ತನ್ನ ನಂತರವೂ ಈ ಆಸ್ಪತ್ರೆ ನಿರಂತರವಾಗಿ ಬಡಜನರ ಸೇವೆ ಮುಂದುವರಿಸಬೇಕೆಂಬ ದೃಷ್ಟಿಯಿಂದ ಸುಮಾರು 1924-25ರ ಅವಧಿಯಲ್ಲಿ ಆಸ್ಪತ್ರೆ ಕಟ್ಟಡ ಮತ್ತು ಜಾಗಗಳನ್ನು ಅಂದಿನ ಉಡುಪಿ ತಾಲೂಕು ಬೋರ್ಡ್‌ಗೆ ಶರ್ತಗಳ ಮೇರೆಗೆ ಉಚಿತವಾಗಿ ಹಸ್ತಾಂತರಿಸಿದ್ದರು.
ನಂತರ ಉಡುಪಿ ತಾಲೂಕು ಬೋರ್ಡ್‌ನವರು 1932ರಲ್ಲಿ ರಿಜಿಸ್ಟರ್ಡ್ ದಾಖಲೆ ಪ್ರಕಾರ ನಿರ್ದಿಷ್ಟವಾದ ಶರ್ತಗಳ ಮೇರೆಗೆ ಅಂದಿನ ಮದ್ರಾಸ್ ಸರ್ಕಾರದ ಸುಪರ್ದಿಗೆ ನೀಡಿದ್ದರು. ಶರ್ತಗಳ ಪ್ರಕಾರ ಮುಖ್ಯವಾಗಿ ಈ ಆಸ್ಪತ್ರೆಗಳು ಎಂದೆಂದಿಗೂ ಬಡಜನರ ಸೇವೆಗಾಗಿ ಇರುವ ಸರಕಾರಿ ಆಸ್ಪತ್ರೆಯೇ ಆಗಿರಬೇಕು ಮತ್ತು ಆಸ್ಪತ್ರೆಯ ಹೆಸರನ್ನು ಯಾವತ್ತೂ ಬದಲಾಯಿಸ ಬಾರದು. ಈ ರೀತಿ ಆಸ್ಪತ್ರೆಗಳು ನಿರಾಂತಕವಾಗಿ ಕಳೆದ ಸುಮಾರು 85 ವರ್ಷದಿಂದ ನಡೆದುಕೊಂಡು ಬರುತ್ತಿತ್ತು.